ಜಿಲ್ಲೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಬಸವರಾಜ ವೀರಪ್ಪ ಗರಗ

ಹಿರೇಕೆರೂರ: ಪರಿಸರ ಉಳಿಸಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಎಸ್​ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಬಣಕಾರ ಹೇಳಿದರು.

ತಾಲೂಕಿನ ದೂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಾಲಾ ಆವರಣದಲ್ಲಿ ಬುಧವಾರ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೈಸರ್ಗಿಕ ಆವಾಸ ಸ್ಥಾನಗಳು ನಮ್ಮೆಲ್ಲರ ಜೀವನಾಡಿಗಳು. ಭೂಮಿ ಹಾಗೂ ಇಲ್ಲಿನ ಪರಿಸರಕ್ಕೆ ಪರ್ಯಾಯ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುನೀತಾ ಮಾತನಾಡಿ, ಪೂರ್ವಜರು ಉಳಿಸಿ ಕೊಟ್ಟಿರುವ ಅರಣ್ಯವನ್ನು ನಾಶಪಡಿಸುವ ಮೂಲಕ ಪರಿಸರದ ಅವನತಿಗೆ ಕಾರಣವಾಗುತ್ತಿರುವ ನಮ್ಮ ತಪ್ಪುಗಳನ್ನು ಯಾರೂ ಸಹ ಕ್ಷಮಿಸಲು ಸಾಧ್ಯವಿಲ್ಲ. ಎಲ್ಲರೂ ಗಿಡ ಮರಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕರಾದ ರತ್ನ ಮತ್ತು ಸುನೀತಾ ಮಾತನಾಡಿದರು. ಕೃಷಿ ಮೇಲ್ವಿಚಾರಕ ಧರ್ಮಪ್ಪ. ಜೊಗೇರ, ವಲಯ ಮೇಲ್ವಿಚಾರಕ ಪ್ರಶಾಂತ್, ಒಕ್ಕೂಟದ ಅಧ್ಯಕ್ಷೆ ವಿಜಯಾ ದೊಣ್ಣೆರ, ಒಕ್ಕೂಟದ ಉಪಾಧ್ಯಕ್ಷೆ ಸುಮಿತ್ರಾ ಪಾಟೀಲ, ಸೇವಾ ಪ್ರತಿನಿಧಿ ಅಕ್ಕಮ್ಮ ವೈ, ಯಶೋಧಾ ಎಂ., ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.