ಜಿಲ್ಲೆ

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಹಬ್ಬಗಳು ನಮ್ಮ ಬದುಕಿಗೆ ಸುಖ ಸಂತೋಷ ನೀಡಲು, ನಮ್ಮ ಸಂಸ್ಕೃತಿ ಉಳಿಸಲು ಬರುತ್ತವೆ. ಹಬ್ಬಗಳ ಆಚರಣೆ ಪರಿಸರಕ್ಕೆ ಪೂರಕವಾಗಿರಬೇಕೆ ವಿನಃ ಮಾರಕವಾಗಿರಬಾರದು ಎಂದು ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಹೇಳಿದರು.

ನಗರದ ನಿಡವಣಿ ಪದವಿ ಪೂರ್ವ ಕಾಲೇಜು, ಹು-ಧಾ ನಾಗರಿಕ ಪರಿಸರ ಸಮಿತಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಆಶ್ರಯದಲ್ಲಿ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದೀಪಾವಳಿ ಹಬ್ಬದಲ್ಲಿ ಪಟಾಕಿಗಳ ಬಳಕೆಯಿಂದಾಗುವ ಪರಿಸರ ಹಾನಿ ಕುರಿತ ಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ವಿಪರೀತ ಕೆಡುತ್ತಿದ್ದು, ಅದರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ನಮ್ಮ ನಿತ್ಯದ ಬದುಕಿನಲ್ಲಿ ಪರಿಸರ ಉಳಿವಿಗೆ ಕಾಳಜಿ ವಹಿಸಬೇಕು ಎಂದರು.

ಕೆ.ಎಚ್​. ನಾಯಕ ಮಾತನಾಡಿ, ಸಂಪ್ರದಾಯವನ್ನು ನಮ್ಮ ಹಿರಿಯರು ಒಳ್ಳೆ ಉದ್ದೇಶದಿಂದ ಮಾಡಿಟ್ಟಿದ್ದಾರೆ. ಆದರೆ ನಾವು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ. ಈಗಾಗಲೇ ಸಾಕಷ್ಟು ಪರಿಸರ ಹಾಳು ಮಾಡಿದ್ದೇವೆ. ಹೀಗಾಗಿ ಪರಿಸರ ಉಳಿಸಿಕೊಳ್ಳುವ ಹೊಣೆಗಾರಿಕೆ ಇಂದಿನ ಮಕ್ಕಳ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಡವಣಿ ಸಂಸ್ಥೆ ಅಧ್ಯಕ್ಷೆ ಪ್ರಭಾ ನಿಡವಣಿ ಮಾತನಾಡಿ, ನಾವು ಬದುಕುವುದರ ಜತೆಗೆ ನಮ್ಮೊಂದಿಗೆ ಇರುವ ಪಶು, ಪಕ್ಷಿ, ಗಿಡ, ಮರಗಳ ರಕ್ಷಣೆ ಮಾಡಬೇಕು ಎಂದರು.

ಅನುಪಮಾ ಬುಕ್ಕೆಬಾಗ ಸ್ವಾಗತಿಸಿದರು. ಪರಿಸರ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ ಬಾಳಿಕಾಯಿ, ಉಪನ್ಯಾಸಕರು, ಸಿಬ್ಬಂದಿ, ಇತರರು ಇದ್ದರು.