ವಿಜಯವಾಣಿ ಸುದ್ದಿಜಾಲ ಮಾಗಡಿ
ಪ್ರತಿಯೊಬ್ಬರೂ ಒಂದು ಸಸಿ ನೆಟ್ಟರೆ ಪರಿಸರ ಉಳಿವಿಗೆ ಸಹಕಾರಿಯಾಗಲಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪುರಸಭೆ ವ್ಯವಸ್ಥಾಪಕ ಶಿವಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ 2ನೇ ವಾರ್ಡ್‌ನ ಉದ್ಯಾನವನದಲ್ಲಿ ‘ಗ್ರೀನ್ ಸ್ಪಾಟ್ ಇನಿಶಿಯೇಟಿವ್, ತ್ಯಾಜ್ಯದಿಂದ ಸಂಪತ್ತು’ಎಂಬ ಶೀರ್ಷಿಕೆಯಡಿ ಅಭಿಯಾನ ಹಾಗೂ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು ಎಂದೆಂದಿಗೂ ಉಳಿಯಬೇಕು. ನಾವೆಲ್ಲರೂ ಪರಿಸರದ ಮೇಲೆ ಅವಲಂಭಿತರಾಗಿದ್ದು, ಅದಕ್ಕಾಗಿ ಪರಿಸರ ಸಂರಕ್ಷಿಸಲು ಮುಂದಾಗಿ ಪರಿಸರ ಸ್ನೇಹಿಯಾಗಿ ಬದುಕೋಣ ಎಂದು ಕರೆ ನೀಡಿದರು.
ನಾಗರೀಕರು ಕಸವನ್ನು ರಸ್ತೆಯಲ್ಲಿ ಹಾಕದೆ, ಮನೆ ಬಳಿ ಬರುವ ಪುರಸಭೆಯ ಕಸದ ವಾಹನಕ್ಕೆ ನೀಡಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಬಹಳಷ್ಟು ಮಂದಿ ಬಳಸುತ್ತಿದ್ದಾರೆ. ಇದರಿಂದ ಅಂತರ್ ಜಲ ಕುಸಿಯುತ್ತದೆ. ಈ ಬಗ್ಗೆ ನಿರಂತರವಾಗಿ ಅರಿವು ಹಾಗೂ ಅಭಿಯಾನ ಹಮ್ಮಿಕೊಂಡರೂ ಪ್ಲಾಸ್ಟಿಕ್ ಬಳಕೆ ಮುಂದುವರಿಸಿರುವುದು ಬೇಸರ ಮೂಟಿದೆ. ಏಕ ಬಳಕೆ ಪ್ಲಾಸ್ಟಿಕ್ ಬಳಸಬೇಡಿ, ಪ್ಲಾಸ್ಟಿಕ್ ಬಳಕೆ ಮಾಡುವರ ವಿರುದ್ಧ ದಂಡವಸೂಲಿ ಮಾಡಲಾಗುತ್ತಿದ್ದು, ಇದಕ್ಕೆ ಆಸ್ಪದ ನೀಡಬಾರದು ಎಂದರು.
ಮುಖ್ಯಾಧಿಕಾರಿ ಮಂಜಮ್ಮ, ಸಿಬ್ಬಂದಿ ಲೋಕೇಶ್, ಪೌರಕಾರ್ಮಿಕರಾದ ಉಮೇಶ್, ಗಂಗರಾಮಯ್ಯ, ಕೆಂಪಯ್ಯ, ಚಳ್ಳಕೆರೆ ನರಸಿಂಹಮೂರ್ತಿ, ಅಂಗನವಾಡಿ ಶಿಕ್ಷಕಿಯರು ಇದ್ದರು.
ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ
ಪಟ್ಟಣದ ಪ್ರತಿಯೊಂದು ಉದ್ಯಾನವನಗಳಲ್ಲಿ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಟ್ಟಣದಲ್ಲಿ ಕೆಶಿಫ್ ರಸ್ತೆ ಕಾಮಗಾರಿ ಮುಗಿದ ಬಳಿಕ ರಸ್ತೆ ಬದಿ ಸಸಿ ನೆಡುವ ಕಾರ್ಯಮಾಡಲಾಗುವುದು. ಮನುಷ್ಯ ನೈಸರ್ಗಿಕ ಸಂಪನ್ಮೂಲ ದಿನೆದಿನೇ ಹಾಳುಮಾಡಿದರೆ ಮುಂದೆ ಆಪತ್ತು ಗ್ಯಾರಂಟಿ, ಪರಿಸರ ಹಾಳು ಮಾಡುವುದನ್ನು ನಿಲ್ಲಿಸಿ, ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ, ಹೆಚ್ಚು ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ ಪ್ರಕೃತಿ ಮಾತೆಯ ಒಡಲು ಹಸಿರಾಗಿಸುವಂತೆ ಮಾಡಬೇಕು. ಪಟ್ಟಣದ ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈ ಜೋಡಿಸಿ ಸುಂದರವಾದ ಪಟ್ಟಣ ನಿರ್ಮಾಣಕ್ಕೆ ಮುಂದಾಗುವಂತೆ ಹಿರಿಯ ಆರೋಗ್ಯ ನಿರೀಕ್ಷಕಿ ಸಿ.ವಿ. ಕುಸುಮಾ ಮನವಿ ಮಾಡಿದರು.