ಶನಿವಾರಸಂತೆ: ಅರಣ್ಯ, ಪರಿಸರ, ಸಸ್ಯ ಸಮೃದ್ಧಿ, ಜೀವಸಂಕುಲವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಂಗಪ್ಪ ಹೇಳಿದರು.
ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮರಗಿಡಗಳಿಂದ ಮನುಷ್ಯ ಆರೋಗ್ಯವಾಗಿ ಜೀವನ ನಡೆಸುತ್ತಾನೆ. ಆದರೆ ಇಂದು ಮನುಷ್ಯನ ದುರಾಸೆಗೆ ಅರಣ್ಯ ಬರಿದಾಗುತ್ತಿದ್ದು, ಈ ವಿದ್ಯಾಮಾನದಲ್ಲಿ ಪ್ರತಿಯೊಬ್ಬರೂ ಪರಿಸರ ಉಳಿಸಲು ಪ್ರಯತ್ನಿಸಬೇಕಿದೆ ಎಂದರು.
ಅರಣ್ಯ ಸಸ್ಯರಾಶಿಯನ್ನು ಸಮೃದ್ಧಿಗೊಳಿಸಬೇಕಾದರೆ ಪ್ರತಿಯೊಬ್ಬರೂ ಮರ ಗಿಡಗಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅರಣ್ಯ, ಪರಿಸರ, ಜೀವ ಸಂಕುಲಗಳ ಮಹತ್ವದ ಬಗ್ಗೆ ಅರಿತುಕೊಂಡು ಜನರನ್ನು ಜಾಗೃತಗೊಳಿಸಬೇಕು. ಅರಣ್ಯದಲ್ಲಿ ಮರಗಿಡಗಳನ್ನು ಕಡಿಯುವುದು ಹಾಗೂ ವನ್ಯಜೀವಿಗಳನ್ನು ಬೇಟೆಯಾಡುವವರ ವಿರುದ್ಧ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.
ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ.ವಿ.ಗಾನಶ್ರೀ ಮಾತನಾಡಿ, ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಇಲಾಖೆಯು ಗ್ರಾಮಸ್ಥರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಯಲ್ಲಿ ಮರಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಅರಣ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ಇರಬೇಕು ಎಂದು ಸಲಹೆ ನೀಡಿದರು.
ಶನಿವಾರಸಂತೆ ಅರಣ್ಯ ಉಪ ವಲಯಾಧಿಕಾರಿ ಸಿ.ಕೆ.ಭವ್ಯಾ, ಕೊಡ್ಲಿಪೇಟೆ ವಿದ್ಯಾಸಂಸ್ಥೆ ಉಪಾಧ್ಯಕ್ಷ ಸಿ.ವಿ.ಶಂಭುಲಿಂಗಪ್ಪ, ವಿದ್ಯಾಸಂಸ್ಥೆ ಕಾರ್ಯದರ್ಶಿ ಪರಮೇಶ್ವರ್, ಖಜಾಂಜಿ ಡಾ.ಉದಯ್ ಕುಮಾರ್, ನಿರ್ದೇಶಕರಾದ ಶಿವಪ್ರಸಾದ್, ಸುಲೋಚನ ಗಿರೀಶ್, ಪದವಿ ಕಾಲೇಜು ಪ್ರಾಂಶುಪಾಲ ಎಂ.ಆರ್.ನಿರಂಜನ್, ಪ.ಪೂ.ಕಾಲೇಜು ಪ್ರಾಂಶುಪಾಲ ಪವಾರ್, ಆಡಳಿತಾಧಿಕಾರಿ ಜಗದೀಶ್ ಬಾಬು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಗೆ ಸೇರಿದ ಜಾಗದಲ್ಲಿ ಗಿಡಗಳನ್ನು ನೆಡಲಾಯಿತು.