ಚನ್ನರಾಯಪಟ್ಟಣ : ಕಾಡು, ಸರೋವರ, ನದಿಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ತಿಳಿಸಿದರು.
ಟೈಮ್ಸ್ ವಿದ್ಯಾ ಸಂಸ್ಥೆಯಿಂದ ಪಟ್ಟಣದ ಟೈಮ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಟೈಮ್ಸ್ ಹಸಿರ ಸಿರಿ ಸತ್ಯೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಬರದ ಪರಿಣಾಮದಿಂದಾಗಿ ಮರುಭೂಮೀಕರಣ ಹೆಚ್ಚುತ್ತಿದೆ. ಇದರ ವಿರುದ್ಧ ಎಲ್ಲ ನಾಗರಿಕರು ಹೋರಾಡಬೇಕಿದೆ. ಅದೂ ಗಿಡಗಳನ್ನು ನೆಟ್ಟು, ನೀರೆರೆಯು, ಬೆಳೆಸುವ ಮೂಲಕ ಕ್ಷೀಣಿಸುತ್ತಿರುವ ಭೂಮಿಯನ್ನು ಉಳಿಸಿಕೊಳ್ಳಬೇಕಾದೆ ಎಂದರು.
ಗಿಡಗಳನ್ನು ಬೆಳೆಸುವುದು, ನಗರಗಳನ್ನು ಹಸಿರೀಕರಣ ಮಾಡುವುದು, ಉದ್ಯಾನಗಳನ್ನು ಮರು ನಿರ್ಮಾಣ ಮಾಡುವುದು, ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ. ಶಾಲಾ-ಕಾಲೇಜುಗಳ ಆವರಣ, ದೇವಾಲಯ, ರಸ್ತೆಗಳ ಅಕ್ಕಪಕ್ಕದಲ್ಲಿ, ಹಾಸ್ಟೆಲ್‌ಗಳ ಖಾಲಿ ಜಾಗ ಹೀಗೆ ಹತ್ತು ಹಲವು ಜಾಗಗಳಲ್ಲಿ ಸಸಿಗಳನ್ನು ಬೆಳೆಸಲು ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖಲಂದರ್ ಮಾತನಾಡಿ, ಪ್ರಕೃತಿ ದೇವರು. ಪ್ರಕೃತಿಯನ್ನು ರಕ್ಷಿಸಬೇಕಾದ ಹೊಣೆ ಎಲ್ಲರ ಮೇಲಿದೆ. ಅರಣ್ಯ ನೀತಿ ಪ್ರಕಾರ ಭಾರತದಲ್ಲಿ ಶೇ.33 ರಷ್ಟು ಪ್ರಮಾಣದಲ್ಲಿ ಕಾಡು ಇರಬೇಕು. ಸದ್ಯ ಶೇ 20 ರಷ್ಟು ಸಸ್ಯಸಂಪತ್ತು ಇದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರವನ್ನು ರಕ್ಷಣೆ ಮಾಡುವ ಹೊಣೆ ನಿಭಾಯಿಸಿದರೆ ಭವಿಷ್ಯದ ಜೀವನ ಚೆನ್ನಾಗಿರುತ್ತದೆ ಎಂದರು.
ಪರಿಸರವಾದಿ ಸಿ.ಎನ್.ಅಶೋಕ್ ಮಾತನಾಡಿ, ಕುಡಿಯುವ ನೀರು, ಗಾಳಿ ಮತ್ತು ವಾಯುಮಾಲಿನ್ಯ ಮಾಡದಂತೆ ಬದುಕು ಕಟ್ಟಿಕೊಳ್ಳಬೇಕು. ಜನ್ಮದಿನ, ವಿವಾಹ ಸೇರಿ ಶುಭ ಸಮಾರಂಭದಲ್ಲಿ, ಆಲದಮರ, ಗೋಣಿ, ಬಸರಿ, ಬೇವು, ಹೊಂಗೆ ಸೇರಿ ದೇಸಿ ಗಿಡಗಳನ್ನು ನೆಡಬೇಕು ತಿಳಿಸಿದರು.
ರೋಟರಿ ಕ್ಲಬ್ ಜಿಲ್ಲಾ ಪ್ರಾಂಥಪಾಲ ದೇವಾನಂದ್ ಮಾತನಾಡಿ, ಟೈಮ್ಸ್ ಪಿಯು ಕಾಲೇಜಿನ 550 ವಿದ್ಯಾರ್ಥಿಗಳಿಗೆ ತಲಾ ಎರಡು ಗಿಡಗಳನ್ನು ನೀಡಲಾಗಿದೆ. ಅವುಗಳನ್ನು ನೆಟ್ಟು ಪೋಷಣೆ ಮಾಡುವರಿಗೆ ರೋಟರಿ ಕ್ಲಬ್ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ರೋಟರಿ ಕ್ಲಬ್ ಸಹಾಯಕ ಪ್ರಾಂಥಪಾಲರಾದ ನಿರ್ಮಲ್ ಕುಮಾರ್ ಜೈನ್, ಸಂತೋಷ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ವಿ. ವಿಜಯ್, ಕಾರ್ಯದರ್ಶಿ ಎಸ್.ಎಸ್.ಕುಮುದಾ, ಪದಾಧಿಕಾರಿಗಳಾದ ಸಚಿನ್, ವಿಕ್ರಂ, ಕಾಲೇಜು ಪ್ರಾಂಶುಪಾಲ ಎಚ್.ಎಂ. ಶ್ರೀಕಂಠ ಭಾಗವಹಿಸಿದ್ದರು.