ಕುಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಗಿಡ ನೆಟ್ಟರು. ಟಿ.ಜಿ.ಪ್ರೇಮಕುಮಾರ್, ಪೂರ್ಣಿಮಾ, ಜವರಯ್ಯ, ರಾಜಣ್ಣ ಇದ್ದರು.  
ಜಿಲ್ಲೆ

ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯ

ಅಭಿನಯ್ ಎಚ್.ಎಂ

ಕುಶಾಲನಗರ: ಪರಿಸರ ಮಾಹಿತಿ ಕಾರ್ಯಕ್ರಮ 2024 ರ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಕುಶಾಲನಗರ ವಲಯ ವತಿಯಿಂದ ಸೋಮವಾರ ಸಮೀಪದ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಸಸಿನೆಟ್ಟು ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು.

ಶಾಲೆಯ ಜೆ.ಸಿ.ಬೋಸ್ ಇಕೋ ಕ್ಲಬ್, ಎನ್ನೆಸ್ಸ್ಸೆಸ್ಸ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ರೆಡ್ ರಿಬ್ಬನ ಕ್ಲಬ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್, ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯಕ್ಕಾಗಿ ನಾವು ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದರು.

ಗಿಡಗಳನ್ನು ನೆಡಲು ವಿದ್ಯಾರ್ಥಿಗಳು ಹಾಗೂ ಜನರನ್ನು ಪ್ರೋತ್ಸಾಹಿಸಲು ಸರ್ಕಾರ ವಿವಿಧ ಹಂತಗಳಲ್ಲಿ ವಿವಿಧ ನೆಡುತೋಪು ಅಭಿಯಾನ ಆಯೋಜಿಸುತ್ತಿದೆ. ಪ್ರತಿಯೊಬ್ಬರೂ ಪ್ರಕೃತಿ ಮಾತೆಯಾದ ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಜಾಗಗಳಲ್ಲಿ ಅರಣ್ಯ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಮನೆ, ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಧರ್ಮಸ್ಥಳ ಸಂಘದ ವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳು ಗ್ರಾಮೀಣ ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಬಹಳ ಸಹಕಾರಿ ಎಂದರು.

ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಗಿಡ ನೆಟ್ಟು ಅದನ್ನು ಪೋಷಿಸಬೇಕು ಎಂದರು.

ಧರ್ಮಸ್ಥಳ ಸಂಘದ ಕುಶಾಲನಗರ ವಲಯದ ಮೇಲ್ವಿಚಾರಕಿ ಪೂರ್ಣಿಮಾ ಮಾತನಾಡಿದರು. ಯೋಜನೆಯ ತಾಲೂಕು ಕೃಷಿ ಅಧಿಕಾರಿ ರಾಜಣ್ಣ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ, ಸದಸ್ಯೆ ಶೃತಿ, ಒಕ್ಕೂಟದ ಅಧ್ಯಕ್ಷ ಗಿರೀಶ್, ಸಂಘದ ಕೂಡ್ಲೂರು ಸೇವಾ ಪ್ರತಿನಿಧಿ ನಿರ್ಮಲ, ವಿಜಯನಗರ ಸೇವಾ ಪ್ರತಿನಿಧಿ ಸುನೀತಾ, ಶಾಲೆಯ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ, ಬಿ.ಎನ್.ಸುಜಾತಾ, ಅನ್ಸಿಲಾ ರೇಖಾ, ಎಸ್.ಎಂ.ಗೀತಾ ಇತರರಿದ್ದರು.

ವಿದ್ಯಾರ್ಥಿಗಳು ಹಾಗೂ ಸಂಘದ ಸ್ವಯಂ ಸೇವಕರು ಅರಣ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರಿಗೆ ಸಸಿ ವಿತರಿಸಲಾಯಿತು. ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಪ್ರಚುರ ಪಡಿಸಿದರು.