ಚನ್ನರಾಯಪಟ್ಟಣ: ಪರಿಸರ ಮಾಲಿನ್ಯ ಮತ್ತು ವಾತಾವರಣದ ವೈಪರೀತ್ಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿರುವುದರ ಜತೆಗೆ ಮಾನವನ ಆರೋಗ್ಯ ವ್ಯವಸ್ಥೆಗೆ ಮಾರಕವಾಗಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದರು.
ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತರೋಗ ನಿಯಂತ್ರಣಾಧಿಕಾರಿ ಕಚೇರಿ ವತಿಯಿಂದ ವಿಶ್ವ ಪರಿಸರ ಆರೋಗ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೃತ್ತದಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಮಾನವ ಸರಪಳಿ ರಚನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮಾನವ ಸೇರಿದಂತೆ ಇತರ ಪ್ರಾಣಿ-ಪಕ್ಷಿಗಳು, ಜೀವ ಸಂಕುಲ ಪರಿಸರವನ್ನು ಅವಲಂಬಿಸಿವೆ. ಇದರೆ ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಮಾನವ ಹಾಗೂ ಪ್ರಕೃತಿಗೂ ನಡುವೆ ಇರುವ ಸಂಬಂಧವನ್ನು ಉಳಿಸಿಕೊಳ್ಳಬೇಕಿದ್ದು, ತ್ಯಾಜ್ಯ ವಸ್ತು, ಪ್ಲಾಸ್ಟಿಕ್ ನಿರ್ವಹಣೆ, ಗಾಳಿ, ನೀರು, ಬೆಳಕನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೀಟಶಾಸ್ತ್ರಜ್ಞ ರಾಜೇಶ್ ಕುಲಕರ್ಣಿ ಮಾತನಾಡಿ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸದೃಢ ಸಮುದಾಯವನ್ನು ರೂಪಿಸಬೇಕಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಿಂಗೇಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಲಿಂಗಯ್ಯ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ವಿಶಾಲಾಕ್ಷಿ, ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ರಾಜು, ಉಪನ್ಯಾಸಕಿ ರಮ್ಯಾ, ಸಿಬ್ಬಂದಿ ಭರತ್, ಸೈಮನ್‌ರಾಜ್ ಇತರರು ಉಪಸ್ಥಿತರಿದ್ದರು.