ಜಿಲ್ಲೆ

ಪರಿಸರ ನೈರ್ಮಲ್ಯ ಪ್ರತಿಯೊಬ್ಬರ ಕರ್ತವ್ಯ

ಕಿರಣ್ ಗೌಡ.ಜಿ

ವಿರಾಜಪೇಟೆ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ವಿರಾಜಪೇಟೆ ಪುರಸಭೆಯ ಅಧ್ಯಕ್ಷೆ ಎಂ.ಕೆ.ದೇಚಮ್ಮ ಕಾಳಪ್ಪ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಹೋಟೆಲ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ‘ಸ್ವಚ್ಛ ಕೊಡಗು ಸುಂದರ ಕೊಡಗು’ ಪರಿಕಲ್ಪನೆಯಲ್ಲಿ ಸೇಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ, ವಿರಾಜಪೇಟೆ ಪುರಸಭೆ ಹಾಗೂ ವಿರಾಜಪೇಟೆ ತಾಲೂಕು, ನಗರ ವರ್ತಕರ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತೆ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕು. ಈಗಾಗಲೇ ವಿರಾಜಪೇಟೆ ಪುರಸಭೆಯಿಂದ ಸ್ವಚ್ಛ ನಗರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ. ಸ್ವಚ್ಛತಾ ಜಾಗೃತಿಯಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದರು.

ವಿರಾಜಪೇಟೆ ನಗರ ವರ್ತಕರ ಸಂಘದ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ, ಸ್ವಚ್ಛ ಪರಿಸರ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು. ನಮ್ಮ ಮನೆಗಳಿಂದಲೇ ಸ್ವಚ್ಛತೆ ಆರಂಭವಾಗಬೇಕು. ಆಗ ಮಾತ್ರ ನಮ್ಮ ಸಮಾಜದ ಪರಿಸರವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು. ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಗುರುಗಳು ಹಾಗೂ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಮಾತನಾಡಿದರು.

ವಿರಾಜಪೇಟೆಯ ಪುರಸಭಾ ಸದಸ್ಯರಾದ ಡಿ.ಪಿ.ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಮತೀನ್, ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ನ ಸಹಾಯಕ ಗುರುಗಳಾದ ಫಾ. ಅಭಿಲಾಷ್, ವಿರಾಜಪೇಟೆ ವರ್ತಕರ ಸಂಘದ ಪದಾಧಿಕಾರಿಗಳು, ಸೆಂಟ್ ಆನ್ಸ್ ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮಾ ಇದ್ದರು.

ಬಳಿಕ ಅಭಿಯಾನ ಅಂಗವಾಗಿ ಕಾಲೇಜಿನ ಮುಂಭಾಗದ ಮುಖ್ಯರಸ್ತೆಯಿಂದ ಚಿಕ್ಕಪೇಟೆ -ಬೋಯಿಕೇರಿ ಹಾಗೂ ಕೆದಮುಳ್ಳೂರು ರಸ್ತೆಯವರೆಗೂ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಸ್ವಚ್ಛತೆ ಕಾರ್ಯ ನಡೆಸಿದರು. ರಸ್ತೆಯ ಎರಡು ಭಾಗಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿಗಳನ್ನು ಹೆಕ್ಕಿ ವಿರಾಜಪೇಟೆ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಾಕಿದರು. ಮಾತ್ರವಲ್ಲದೆ ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು ಜಾಗೃತಿಯನ್ನು ಮೂಡಿಸಿದರು.

ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಬಿ. ಎನ್. ಶಾಂತಿ ಭೂಷಣ್, ವಿರಾಜಪೇಟೆ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್, ಸಮಾಜ ಸೇವಕರಾದ ಯೋಗೇಶ್ ನಾಯ್ಡು, ಉಪನ್ಯಾಸಕರಾದ ಜೇಮ್ಸ್ ಅಂಟೋನಿ, ವಿಲೀನ ಗೋನ್ಸಾಲ್ವೇಸ್, ಶಶಿಕಲಾ ಹಾಗೂ ಆದಿತ್ಯ, ವಿರಾಜಪೇಟೆ ವರ್ತಕರ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.