ಹಾನಗಲ್ಲ: ಸ್ವಚ್ಛತೆಗಾಗಿ ಸರ್ಕಾರಗಳು ಕೋಟಿ ಕೋಟಿ ರೂ.ಗಳನ್ನು ವಿನಿಯೋಗಿಸುವ ಅನಿವಾರ್ಯತೆಗೆ ಎದುರಾಗಿದೆ. ಇದರಿಂದ ಮುಕ್ತಿ ಪಡೆಯಲು ನಮ್ಮ ಪರಿಸರದ ಸ್ವಚ್ಛತೆಗೆ ನಾವೇ ಜವಾಬ್ದಾರಿ ಹೊರಬೇಕು ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಹೇಳಿದರು.
ಪಟ್ಟಣದ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ವಿಭಾಗದಿಂದ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ 23 ವಾರ್ಡ್ಗಳ ಘನತ್ಯಾಜ್ಯ ನಿರ್ವಹಣಾ ಸಮೀಕ್ಷಾ ವರದಿ ಬಿಡುಗಡೆ ಹಾಗೂ ಭೂಗೋಳಶಾಸ್ತ್ರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪರಂಪರಾಗತ ಜೀವನ ಕ್ರಮ ನಾಗರಿಕ ವ್ಯವಸ್ಥೆಯಲ್ಲಿ ಸ್ವಚ್ಛತೆಯ ಲೋಪದಿಂದ ಅನಾಗರಿಕ ಬೆಳವಣಿಗೆಗೆ ಕಾರಣವಾಗಿದೆ. ಘನತ್ಯಾಜ್ಯ ನಿರ್ವಹಣೆ ಈಗ ಸ್ಥಳೀಯ ಸಂಘ- ಸಂಸ್ಥೆಗಳಿಗೆ ದೊಡ್ಡ ಹೊರೆಯಾಗುತ್ತಿದೆ. ಇದರಿಂದ ಮುಕ್ತಿ ಪಡೆಯಲು ಹಾಗೂ ಆರೋಗ್ಯವಂತ ಭಾರತದ ಕನಸು ನನಸಾಗಲು ನಾವೆಲ್ಲರೂ ಜಾಗೃತರಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಮಾತನಾಡಿ, ಪ್ಲಾಸ್ಟಿಕ್ ಮರುಬಳಕೆಯ ಸಮಸ್ಯೆ ಈಗ ದೊಡ್ಡದಾಗಿದೆ. ಇತರ ಘನ ತ್ಯಾಜ್ಯವನ್ನು ಪರಿವರ್ತಿಸಿ ಸಾವಯವ ಗೊಬ್ಬರ ಮಾಡಲು ಸಾಧ್ಯ. ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರಕ ಎಂಬ ಅರಿವಿದ್ದರೂ ಕೂಡ ಅದನ್ನು ಯಥೇಚ್ಛವಾಗಿ ಸಾರ್ವಜನಿಕರು ಬಳಸಿ ಬಿಸಾಕುತ್ತಿರುವುದು ವಿಶೇಷವಾಗಿ ಪಟ್ಟಣಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈಗ ಇಡೀ ದೇಶದ ಜನರ ಆರೋಗ್ಯಕ್ಕಾಗಿ ಆಲೋಚಿಸುವ ಕಾಲದಲ್ಲಿದ್ದೇವೆ. ಈ ಘನತ್ಯಾಜ್ಯ ನಿರ್ವಹಣೆಗೆ ಇಲಾಖೆ ಹತ್ತು ಹಲವು ನಿರ್ದೇಶನಗಳನ್ನು ನೀಡುತ್ತಿದೆ. ಅದನ್ನು ನಾವು ಪಾಲಿಸುತ್ತಿದ್ದೇವೆ. ಆದರೆ, ಇದು ಮಿತಿ ಮೀರುತ್ತಿರುವುದರಿಂದ ಪುರಸಭೆಯಂತಹ ಸಂಸ್ಥೆಗಳು ಆರ್ಥಿಕ ಸಂಕಟ ಎದುರಿಸುವಂತಾಗಿದೆ. ಈ ಕಾಲೇಜಿನಿಂದ ಉತ್ತಮ ಅಧ್ಯಯನ ಕೈಗೊಂಡಿದ್ದು ಇದು ಸಾರ್ವಜನಿಕರ ಅರಿವಿಗೂ ಬರಬೇಕು ಎಂದರು.
ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ಹೊಳೇರ ಮಾತನಾಡಿ, ಕೈಗಾರಿಕೆಗಳಿಂದ ಒಂದೆಡೆ ಅನುಕೂಲವಾದರೆ ಪರಿಸರದ ದೃಷ್ಟಿಯಲ್ಲಿ ತೀರಾ ಅನಾರೋಗ್ಯಕರವಾಗಿವೆ. ಸಾರ್ವಜನಿಕರು ತಮ್ಮಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ಯೋಚಿಸದಿರುವುದು ತೀರ ಗಂಭೀರ ಸಮಸ್ಯೆಯಾಗಿದೆ. ಹಾನಗಲ್ಲ ಪಟ್ಟಣದಲ್ಲಿ ಪ್ರತಿದಿನ 19 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದರ ನಿರ್ವಹಣೆಗೆ ಪುರಸಭೆ ಹೆಣಗಾಡುತ್ತಿದೆ ಎಂದರು.
ಪ್ರಾಚಾರ್ಯ ಡಾ.ಎಂ.ಎಚ್. ಹೊಳೆಣ್ಣನವರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಮಾರುತಿ ಶಿಡ್ಲಾಪೂರ, ಸಹಾಯಕ ಪ್ರಾಧ್ಯಾಪಕಿ ಸುಶೀಲಾ ಬಡಿಗೇರ ಇತರರಿದ್ದರು. ಸೌಂದರ್ಯ ಹಿರೇಮಠ, ಪಾರ್ವತಿ ಹಿರೇಮಠ ಹಾಗೂ ಐಶ್ವರ್ಯಾ ಸುಬ್ಬಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.