ಜಿಲ್ಲೆ

ಬರಹದ ಮೂಲಕ ಪರಿಸರ ಜಾಗೃತಿ

ಗಂಗಾಧರ ಬಿ ವಿ

* ನಗರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

* ಅರ್ಕಾವತಿ ನದಿ ದಂಡೆಯಲ್ಲಿ ರಾರಾಜಿಸುತ್ತಿರುವ ಬರಹ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನೂತನ ಪ್ರಯೋಗಗಳ ಮೂಲಕ ಸುಂದರ ಸ್ವಚ್ಛ ನಗರವನ್ನಾಗಿಸುವ ನಿಟ್ಟಿನಲ್ಲಿ ಬರಹದ ಮೂಲಕ ಜನರಲ್ಲಿ ಪರಿಸರ ಜಾಗೃತಿ, ಸುಂದರ ನಗರದ ಪರಿಕಲ್ಪನೆಯ ಅರಿವು ಮೂಡಿಸುವ ವಿನೂತನ ಪ್ರಯೋಗಕ್ಕೆ ರಾಮನಗರ ನಗರಸಭೆ ಮುಂದಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರಶಂಸೆಯೂ ವ್ಯಕ್ತವಾಗಿದೆ.

ರಾಮನಗರದ ಅರ್ಕಾವತಿ ನದಿ ಸೇತುವೆ ಮೇಲೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಜಾಲರಿ ಮೇಲೆ ಬರಹ ಫಲಕಗಳ ಮುಖಾಂತರ ಸ್ವಚ್ಛತೆ, ಪ್ಲಾಸ್ಟಿಕ್ ದುಷ್ಪರಿಣಾಮ, ಜಲಮೂಲ ರಕ್ಷಣೆ, ಹಸಿರು, ಹಸಿ, ಒಣಕಸ ವಿಂಗಡನೆ ಬಗ್ಗೆ ಬರಹದ ರೂಪದಲ್ಲಿ ಜನರಿಗೆ ಮಾಹಿತಿ ನೀಡಲು ಹೆಜ್ಜೆ ಇಟ್ಟಿದೆ. ಹಂತ-ಹಂತವಾಗಿ ಸಾರ್ವಜನಿಕ ಸ್ಥಳ, ಅರ್ಕಾವತಿ ನದಿ ಮತ್ತೊಂದು ಭಾಗ, ಹುಣಸನಹಳ್ಳಿ ನೈಸ್ ರಸ್ತೆ ರಾಜಕಾಲುವೆ ಬಳಿ ಅಳವಡಿಸಿರುವ ಗ್ರಿಲ್ ಜಾಗ, ಬಸ್ ನಿಲ್ದಾಣ ಇತ್ಯಾದಿ ಸ್ಥಳಗಳಲ್ಲಿ ಇಂತಹ ಬರಹಗಳ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಚಿಂತನೆ ಮೂಡಿಸಲು ನಗರಸಭೆ ಸಜ್ಜಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಹಿಂದಿನ ಪ್ರಯತ್ನ ಯಶಸ್ವಿ

ನಗರದ ಪ್ರಮುಖ ಸ್ಥಳಗಳು ಕಸದ ಗುಡ್ಡೆಗಳಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದವು. ಹೊಸ ಪ್ರಯತ್ನದ ಮೂಲಕ ನಗರದ ಪ್ರಮುಖ 29 ಸ್ಥಳದಲ್ಲಿ ಕಸ ಸ್ವಚ್ಛ ಮಾಡಿ ಸ್ಥಳದಲ್ಲಿ ರಂಗೋಲಿ ಬಿಟ್ಟು ಅರಿವು ಮೂಡಿಸಿ ಸಿಸಿ ಕ್ಯಾಮರಾ ಅಳವಡಿಸಿ ವಿನೂತನ ವಿಧಾನದಿಂದ ಕಸದ ಗುಡ್ಡೆಗಳು ಮಾಯವಾಗಿ ಸ್ವಚ್ಛತೆ ಕಂಡಿವೆ.

ಎರಡನೇ ಹಂತದ ಸಿಸಿ ಕ್ಯಾಮರಾ

ಎರಡನೇ ಹಂತದಲ್ಲಿ ಸ್ವಚ್ಛತೆಗೆ ಮುಂದಾಗಿರುವ ನಗರಸಭೆ ಮತ್ತೆ ನಗರದ ವಿವಿಧೆಡೆ 24 ಸ್ಥಳಗಳಲ್ಲಿ ಕಸ ಹಾಕುವ ಜಾಗ ಗುರುತಿಸಿದ್ದು, ಅಲ್ಲೂ ರಂಗೋಲಿ ಬಿಟ್ಟು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಅರ್ಕಾವತಿ ನದಿ ದಂಡೆಯಲ್ಲೇ ಏಕೆ?

ನಗರದ ಹೃದಯಭಾಗದಲ್ಲಿ ಅರ್ಕಾವತಿ ನದಿ ಹರಿಯುವ ಕಾರಣ ಐಜೂರು ಬಸ್ ನಿಲ್ದಾಣದಿಂದ ರೈಲು ನಿಲ್ದಾಣ ಮತ್ತಿತರ ವಾರ್ಡ್‌ಗಳಿಗೆ ಪ್ರಮುಖ ಸಂಪರ್ಕ ಸೇತುವೆ ಇದಾಗಿದೆ. ಪ್ರತಿ ಕ್ಷಣ ಜನನಿಬಿಡ ರಸ್ತೆಯಾಗಿದೆ. ಈ ಹಿಂದೆ ನದಿಗೆ ಕಸ ಕಡ್ಡಿ ಎಸೆಯಲಾಗುತ್ತಿತ್ತು. ಅದನ್ನು ನಗರಸಭೆ ಜಾಲರಿ ಹಾಕಿ ತಡೆಗಟ್ಟಿದೆ. ಅಂತಹ ಜಾಲರಿ ಮೇಲೆ ಬರಹಗಳ ಮುಖಾಂತರ ಜನರಲ್ಲಿ ನೀರು, ಗಾಳಿ, ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ, ನದಿ ಸ್ವಚ್ಛತೆ ಬಗ್ಗೆ ಸುಂದರ ನಗರ ಪರಿಕಲ್ಪನೆ ಬಗ್ಗೆ ಜಾಗೃತಿ ಮೂಡಿಸುವ ಬರಹ ಬರೆಯಲಾಗಿದೆ. ಸೇತುವೆ ಮೇಲೆ ಹೋಗುವ ಜನರು, ಪ್ರಮುಖವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರಹಗಳನ್ನು ಓದಿ ಹೋಗುವ ಕಾರಣದಿಂದ ಸ್ವಚ್ಛತೆಯೆಡೆಗೆ ಸಮಾಜ ಸಾಗಲು ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತದೆ ಎಂಬುದು ನಗರಸಭೆಯ ಚಿಂತನೆ.

ಸ್ವಚ್ಛತೆಗೆ ವಿಶೇಷ ಒತ್ತು

ನಗರಸಭೆ ಪ್ರತಿದಿನ ಉತ್ಪತ್ತಿ ಆಗುವ ಕಸ ಸಂಗ್ರಹಣೆ ಜತೆಗೆ ಖಾಲಿ ನಿವೇಶನಗಳಲ್ಲಿ ಬೆಳೆದ ಗಿಡ-ಗಂಟಿ ತೆರವು ಮಾಡಿ ಸ್ವಚ್ಛತೆ ಕೈಗೊಂಡಿದೆ. ಜತೆಗೆ ಬೆಂಗಳೂರು- ಮೈಸೂರು ಹೆದ್ದಾರಿಯ 6.5 ಕಿ.ಮೀ ನಗರವ್ಯಾಪ್ತಿ ರಸ್ತೆ ಎರಡೂ ಬದಿಗಳಲ್ಲಿ ಸ್ವಚ್ಛತೆ ಕೈಗೊಂಡು ಹೆದ್ದಾರಿ ಸ್ವಚ್ಛತೆ ಪ್ರತಿ 4ನೇ ಶನಿವಾರ ನಗರದ ಉದ್ಯಾನವನಗಳ ಸ್ವಚ್ಛತೆ ನಿರ್ವಹಣೆ ನಡೆಸುತ್ತಿದೆ. ಬರಹಗಳೇನು?

* ನದಿ ಕೆರೆ ಮತ್ತು ಇತರ ಜಲ ಮೂಲಗಳ ಮಾಲಿನ್ಯ ಮಾಡಬೇಡಿ * ಏಕ ಬಳಕೆ ಪ್ಲಾಸ್ಟಿಕ್ ಬಳಸಬೇಡಿ, ಪ್ಲಾಸ್ಟಿಕ್ ಮಣ್ಣಲ್ಲಿ ಕರಗುವುದಿಲ್ಲ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪರಿಸರ ಕಾಪಾಡಿ. * ಪ್ಲಾಸ್ಟಿಕ್ ವಿಕಾಸ ಮನುಕುಲದ ಸರ್ವನಾಶ, ತಡೆಯಿರಿ ಮಾಲಿನ್ಯ ಉಳಿಸಿರಿ ಜೀವ ಸಂಕುಲ ಅರ್ಕಾವತಿ ನದಿ ನಮ್ಮ ಹೆಮ್ಮೆ, ನದಿಗೆ ತ್ಯಾಜ್ಯ ಕಸ ಸುರಿಯಬೇಡಿ. ನದಿಯ ಪಾವಿತ್ರ್ಯ, ಸ್ವಚ್ಛತೆ ಕಾಪಾಡಿ. * ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧಿಸಿದೆ. ಮನೆಗಳಿಂದಲೇ ಬಟ್ಟೆ ಬ್ಯಾಗ್ ತನ್ನಿ

ನಗರಸಭೆ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿದ್ದು, ಅಧಿಕಾರಿಗಳು, ನಗರಸಭೆ ಪೌರ ಸಿಬ್ಬಂದಿ ಅವಿರತವಾಗಿ ನಗರಸಭೆ ಅಧ್ಯಕ್ಷರು, ಸದಸ್ಯರ ಉತ್ತಮ ಸಹಕಾರದಿಂದ ಸ್ವಚ್ಚತೆಗೆ ಶ್ರಮಿಸುತ್ತಿದ್ದಾರೆ. ಹೊಸ ಪ್ರಯತ್ನವಾಗಿ ಬರಹದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಡಿ ಇಟ್ಟಿದ್ದೇವೆ. ಹಂತ-ಹಂತವಾಗಿ ನಗರದ ಮತ್ತಿತರ ಸ್ಥಳಗಳಲ್ಲಿ ಬರಹದ ಮೂಲಕ ಜಾಗೃತಿ ಮೂಡಿಸಲಾಗುವುದು. ಡಾ. ಜಯಣ್ಣ, ಪೌರಾಯುಕ್ತರು, ನಗರಸಭೆ, ರಾಮನಗರ.

ನಗರಸಭೆ ಪೌರ ಸಿಬ್ಬಂದಿ, ಆರೋಗ್ಯ ಸ್ವಚ್ಛತಾ ಶಾಖೆ ಅಧಿಕಾರಿಗಳು ಪ್ರತಿದಿನ ತಮ್ಮ ಕಾಯಕದ ಮೂಲಕ ನಗರದ ಸೌಂದರ್ಯಕ್ಕೆ ಒತ್ತು ನೀಡಿದ್ದಾರೆ. ಆದರೆ, ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲೂ ಅರಿವು ಮೂಡಬೇಕು, ಇದರಿಂದ ಬದಲಾವಣೆ ಸಾಧ್ಯ ಎಂದು ಮನಗಂಡಿರುವ ನಾವು ಬರಹದ ಮೂಲಕ ಜನರಲ್ಲಿ ಹೊಸ ಆಲೋಚನೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆೆ. ಇಂತಹ ಪ್ರಯೋಗ ಮುಂದುವರಿಯಲಿದೆ. ಕೆ. ಶೇಷಾದ್ರಿ, ಅಧ್ಯಕ್ಷ, ನಗರಸಭೆ, ರಾಮನಗರ.