ಮಂಡ್ಯ: ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಜತೆಗೆ ಜಾಗೃತಿ ಮೂಡಿಸುವುದು ಪ್ರತಿ ಭಾರತೀಯನ ಕರ್ತವ್ಯ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಸಲಹೆ ನೀಡಿದರು.
ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಬಿಎಲ್ಎಸ್ ಪ್ರೌಢಶಾಲೆ ಆವರಣದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಹಾಗೂ ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದು ಸಂಪ್ರದಾಯ ಹಬ್ಬಗಳಲ್ಲಿ ದೀಪ ಮತ್ತು ದೀಪಾವಳಿ ಹಬ್ಬಕ್ಕೆ ಹೆಚ್ಚು ಮಹತ್ವವಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬವಾಗಿದೆ. ಈ ಹಬ್ಬವನ್ನು ವಿದೇಶಗಳಲ್ಲೂ ಆಚರಿಸುತ್ತಾರೆ. ಹೆಸರು ಮತ್ತು ಆಚರಣೆಗಳು ವಿಭಿನ್ನವಾದರೂ ಉದ್ದೇಶ ಒಂದೇ ಆಗಿರುತ್ತದೆ. ಕತ್ತಲನ್ನು ಓಡಿಸಿ ಬೆಳಕನ್ನು ತುಂಬುವುದು ದುಷ್ಟತನವನ್ನು ನಿವಾರಿಸಿ ಸದ್ಭಾವನೆಯ ಸಂದೇಶ ಬೀರುವುದು ದೀಪಾವಳಿಯ ಉದ್ದೇಶ ಎಂದು ತಿಳಿಸಿದರು.
ನಾವು ಭಾರತೀಯರು ಬಹಳ ಸಾಹಸ ಪ್ರಿಯರು ಮತ್ತು ಉದಾರಿಗಳು. ಹಬ್ಬದ ಸಂದರ್ಭಗಳಲ್ಲಿ ಇನ್ನೂ ಯಾವುದೇ ಸಂತೋಷದ ಕ್ಷಣಗಳಲ್ಲಿ ಬಹಳ ಅಪಾಯಕಾರಿ ಹಾಗೂ ದುಬಾರಿಯಾದ ಪಟಾಕಿ ಸಿಡಿ ಮದ್ದುಗಳನ್ನು ಖರೀದಿಸಿ ಸಿಡಿಸಿ ಸಂಭ್ರಮಿಸುತಿದ್ದೇವೆ. ನಾವು ಪ್ರತಿ ವರ್ಷ ಪಟಾಕಿ ಖರೀದಿಗೆ ಅಂದಾಜು 15 ಕೋಟಿ ರೂ ಖರ್ಚು ಮಾಡುತ್ತೀದ್ದೇವೆ. ದೀಪಾವಳಿ ಸಂದರ್ಭದಲ್ಲಿ ಸಿಡಿಸುವ ಪಟಾಕಿಯಿಂದಾಗಿ ಬಹಳ ಅನಾಹುತಗಳು ಸಂಭವಿಸುತ್ತಿದ್ದು, ಪ್ರತಿವರ್ಷ ಸಾವಿರಾರು ಜನರು ಮತ್ತು ಮಕ್ಕಳು ದೃಷ್ಟಿ ಕಳೆದುಕೊಳ್ಳುವುದರ ಜತೆಗೆ ಹಲವಾರು ಜನ ಅಂಗವಿಕಲತೆಗೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.
ದೀಪಾವಳಿ ಹಬ್ಬ ಬಹಳಷ್ಟು ಜನರ ಪಾಲಿಗೆ ಕತ್ತಲಾಗಿ ಪರಿಣಮಿಸಿದೆ. ಪಟಾಕಿಯಲ್ಲಿರುವ ರಾಸಾಯನಿಕ ವಸ್ತು ಗಳಿಂದ ಮನುಷ್ಯನ ಆರೋಗ್ಯ ಹಾಗೂ ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ಬಹಳ ಗಂಭೀರ ಪರಿಣಾಮ ಬೀರುತ್ತಿದೆ. ಶ್ವಾಸಕೋಶ, ಉಸಿರಾಟ, ಜೀರ್ಣಾಂಗ, ಕಿಡ್ನಿ ಸಮಸ್ಯೆ ಹಾಗೂ ಒಣ ಕೆಮ್ಮು ಗರ್ಭಿಣಿಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಸಿರು ಪಟಾಕಿಯಲ್ಲೂ ಕೂಡ 20 ರೀತಿಯ ರಾಸಾಯನಿಕವಿದ್ದು, ಅವು ಕೂಡ ಆರೋಗ್ಯಕ್ಕೆ ಹಾನಿಕರ ಪರಿಸರಕ್ಕೆ ಮಾರಕ ಎಂದು ಎಚ್ಚರಿಸಿದ ಅವರು, ಪಟಾಕಿ ತಯಾರಿಕೆ ಅವುಗಳ ಶೇಖರಣೆ, ಸಾಗಾಟ ಬಳಕೆಯಲ್ಲಿ ಪ್ರತಿವರ್ಷ ಹಲವಾರು ದುರಂತಗಳು ಸಂಭವಿಸುತ್ತಿದ್ದು, ನೂರಾರು ಜನರ ಪ್ರಾಣಕ್ಕೆ ಕುತ್ತು ಲಕ್ಷಾಂತರ ಜೀವಿಗಳ ಆರೋಗ್ಯಕ್ಕೆ ಮಾರಕವಾಗಿದೆ. ಹಾಗಾಗಿ ಎಲ್ಲ ರೀತಿಯ ಪಟಾಕಿ ಸಿಡಿಮದ್ದು ತಯಾರಿಕೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಪ್ರೊ.ಶಿವಕುಮಾರ್, 2ನೇ ಉಪ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಶಾಲೆಯ ಮುಖ್ಯಶಿಕ್ಷಕ ಲಿಂಗರಾಜು, ಶಿಕ್ಷಕರಾದ ಗೋಪಿನಾಥ್, ಜಿ.ಪಿ.ದಿವ್ಯಾ ಇತರರಿದ್ದರು. ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಬಿಟಾಕಿ ಪರಿಸರ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.