ಶ್ರೀರಂಗಪಟ್ಟಣ : ತಾಲೂಕಿನ ಪುರಾಣ ಪ್ರಸಿದ್ಧ ಪ್ರಕೃತಿ ತಾಣ ಕರಿಘಟ್ಟ ಬೆಟ್ಟದಲ್ಲಿ ಮಂಗಳವಾರ ಮೈಸೂರಿನ ಸೋಮಾನಿ ಕಾಲೇಜಿನ ಬಿ.ಇಡಿ ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಸಸಿಗಳಿಗೆ ನೀರುಣಿಸಿದರು.
ಮೈಸೂರಿನ ಕ್ರಿಯಾ ಪರಿಸರ ತಂಡದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಪರಿಸರ ಅರಿವು ಶಿಬಿರದಲ್ಲಿ ಕಾಲೇಜಿನ 80ಕ್ಕೂ ಹೆಚ್ಚು ಯುವಕ, ಯುವತಿಯರು ಪರಿಸರ ಪ್ರೇಮಿ ರಮೇಶ್ ನಿರ್ದೇಶನದಲ್ಲಿ ಕುರುಚಲು ಬೆಟ್ಟದಲ್ಲಿ ತುಂಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ ಬೆಳೆದು ಒಣಗಿದ್ದ ನಾಲೆ ಹುಲ್ಲು ಹಾಗೂ ಕಳೆ ಗಿಡಗಳನ್ನು ಕತ್ತರಿಸಿ ತೆರವುಗೊಳಿಸಿದರು.
ಅಲ್ಲಲ್ಲಿ ಪರಿಸರ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆಯಿಂದ ನೆಡಲಾಗಿರುವ ಅಪೂರ್ವ ಸಸಿ, ಮರಗಳ ಸುತ್ತಲೂ ಬದು ನಿರ್ಮಿಸಿ ಗೊಬ್ಬರಗಳನ್ನಾಗಿ ಪರಿವರ್ತಿಸಲು ಮಣ್ಣಿನೊಂದಿಗೆ ಕಳೆಗಿಡಗಳನ್ನು ಹಾಕಿ ಶ್ರಮದಾನ ಮಾಡುವ ಜತೆಗೆ ಸಸಿಗಳನ್ನು ನೆಟ್ಟು ನೀರುಣಿಸಿದರು.
ಬಳಿಕ ಬೆಟ್ಟದ ಚಾವಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಸ್ತುತ ಪರಿಸರ ಮೇಲೆ ಉಂಟಾಗುತ್ತಿರುವ ಮಾಲಿನ್ಯ ಮತ್ತು ನಶಿಸಿ ಹೋಗುತ್ತಿರುವ ಪ್ರಾಕೃತಿಕ ಸಂಪತ್ತು ಉಳಿವಿನ ಕುರಿತು ಕವಿತೆ ಹಾಗೂ ಸಂವಾದಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಉರಗ ತಜ್ಞ ಸ್ನೇಕ್ ನಾರಾಯಣ್ ಹಾವುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಹೇಗೆ ಪಾತ್ರ ನಿರ್ವಹಿಸುತ್ತವೆ ಹಾಗೂ ಯಾವ ಹಾವುಗಳ ಎಷ್ಟು ವಿಷಕಾರಿ ಎಂಬುದರ ಕುರಿತು ನೆರೆದಿದ್ದವರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕ್ರಿಯಾ ಪರಿಸರದ ಮುಖ್ಯಸ್ಥ ಹಾಗೂ ಮಂಡ್ಯದ ಮಹಿಳಾ ಕಾಲೇಜಿನ ಪ್ರೊ.ಪ್ರಸನ್ನ ಕುಮಾರ್, ಸೋಮಾನಿ ಕಾಲೇಜು ಪ್ರಾಂಶುಪಾಲೆ ಡಾ.ಉಷಾ, ಉಪನ್ಯಾಸಕರಾದ ಪ್ರೊ.ವಿನುತಾ, ರಾಜೀವ್‌ಶರ್ಮ, ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಜಯಸ್ವಾಮಿ, ಮಂಡ್ಯ ಮಹಿಳಾ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ಕವಿ ಲೋಕೇಶ್ ಕಲ್ಕುಣಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
----------
ಎಸ್‌ಆರ್‌ಪಿ ಚಿತ್ರ :06-04
ಶ್ರೀರಂಗಪಟ್ಟಣ ತಾಲೂಕಿನ ಪುರಾಣ ಪ್ರಸಿದ್ಧ ಪ್ರಾಕೃತಿಕ ಕರಿಘಟ್ಟ ಬೆಟ್ಟದಲ್ಲಿ ಮಂಗಳವಾರ ಮೈಸೂರಿನ ಸೊಮಾನಿ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ಕಾರ್ಯದಲ್ಲಿ ಭಾಗಿಯಾಗಿದ್ದರು.
-------