ಸುಂಟಿಕೊಪ್ಪ: ಆಧುನಿಕತೆಯ ಹೆಸರಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಹವಾಮಾನ ವೈಪರೀತ್ಯ ನಡೆಯುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರುಷೋತ್ತಮ್ ಹೇಳಿದರು.
ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯ ನಾಶದಿಂದ ಕಾಡುಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಗಮನಹರಿಸಬೇಕೆಂದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಮಾತನಾಡಿ, ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಿ, ಮಂಜಿಕೆರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೂರ್ತಿ ಮಾತನಾಡಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್, ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್, ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷೆ ಭವ್ಯಾ, ಗೀತಾ, ಪುಷ್ಪಲತಾ, ಆರ್ಚನಾ, ಶ್ರೀಮತಿ, ಸೇವಾ ಪ್ರತಿನಿಧಿ ಯಶೋಧಾ ಇತರರು ಇದ್ದರು.