ಜಿಲ್ಲೆ

ಪರಿಸರ, ವನ್ಯಜೀವಿ ಸಂರಕ್ಷಣೆ ಎಲ್ಲರ ಹೊಣೆ: ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ತಿಮ್ಮಯ್ಯ ಹೇಳಿಕೆ

ಜಗಳೂರು: ಏಷ್ಯಾ ಖಂಡದಲ್ಲಿಯೇ ಅಳಿವಿನ ಅಂಚಿನಲ್ಲಿರುವ ಅಪರೂಪದ ಕೊಂಡುಕುರಿ ಪ್ರಾಣಿ ಸಂಕುಲ ತಾಲೂಕಿನಲ್ಲಿರುವುದು ಈ ಭಾಗದ ಜನರ ಸೌಭಾಗ್ಯವಾಗಿದೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಹೇಳಿದರು.

ಇಲ್ಲಿನ ಅರಣ್ಯ ಇಲಾಖೆ ಆವರಣದಲ್ಲಿ ಬುಧವಾರ ರಂಗಯ್ಯನದುರ್ಗ ವನ್ಯಜೀವಿ ವಲಯ, ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 66 ನೇ ವನ್ಯಜೀವಿ ಸಪ್ತಾಹ ಹಾಗೂ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

2010ರಲ್ಲಿ ಈ ಪ್ರದೇಶವನ್ನು ಸರ್ಕಾರ ಸಂರಕ್ಷಿತ ಅರಣ್ಯವೆಂದು ಘೋಷಣೆ ಮಾಡದೇ ಹೋಗಿದ್ದರೆ ಅಪರೂಪದ ಕೊಂಡಕುರಿ ಮತ್ತು ಅರಣ್ಯ ಸಂಪತ್ತಿನ ಉಳಿವು ಕಷ್ಟವಾಗುತ್ತಿತ್ತು. ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಪರಿಶ್ರಮದಿಂದ ನಾನಾ ಜಾತಿಯ ಗಿಡ ಮರಗಳು, ಪ್ರಾಣಿ, ಪಕ್ಷಿಗಳ ಉಳಿವು ಸಾಧ್ಯವಾಗಿದೆ ಎಂದರು.

ವನ್ಯಜೀವಿ ಪರಿಪಾಲಕ ಡಿ. ಶ್ರೀನಿವಾಸ್ ಮಾತನಾಡಿ, ಈ ಬಾರಿ ಅತ್ಯಧಿಕ ಮಳೆಯಿಂದ ರಂಗಯ್ಯನದುರ್ಗ ಅರಣ್ಯಕ್ಕೆ ಕಳೆ ಬಂದಿದೆ. ಕೆರೆ ಕಟ್ಟೆಗಳು ಭರ್ತಿಯಾಗಿ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿದೆ. ಇದರಿಂದ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಷ್ಟೇ ಅಲ್ಲದೆ ಜನ ಜಾನುವಾರುಗಳಿಗೂ ಕುಡಿವ ನೀರಿನ ಅಭಾವ ದೂರವಾಗಲಿದೆ ಎಂದರು.

ಇದೇ ವೇಳೆ ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ತಹಸೀಲ್ದಾರ್ ಡಾ. ನಾಗವೇಣಿ, ವನ್ಯಜೀವಿ ಪರಿಪಾಲಕ ಡಾ.ರವಿಕುಮಾರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಕಾಶ್, ಸಹಾಯಕ ರಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಆರ್‌ಎಫ್‌ಒ ಶಿವಕುಮಾರ್, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ನಾಯ್ಕ ಮತ್ತು ಸಿಬ್ಬಂದಿ ಇದ್ದರು.