ಜಿಲ್ಲೆ

ನಾವು ಪ್ರಕೃತಿಯ ಕೂಸುಗಳು

Uttara Kannada - Subash Hegde

ಕಾರವಾರ: ನಾವು ಪ್ರಕೃತಿಯ ಕೂಸುಗಳು ಇದರಿಂದ ನಾವು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಾರವಾರ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ದೇವಿದಾಸ ನಾಯ್ಕ ಹೇಳಿದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಎಸ್‌ಕೆಡಿಆರ್‌ಡಿಪಿ), ಲಯನ್ಸ್ ಸದಾಶಿವಗಡ ಲಯನ್ಸ್ ಕ್ಲಬ್ ಹಾಗೂ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಕೆಡಿಆರ್‌ಡಿಪಿ ಸದಾಶಿವಗಡ ವಲಯದ ಮೇಲ್ವಿಚಾರಕ ಮಾರುತಿ ನಾಯಕ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಗಳ ಜೀವನ ಮಟ್ಟ ಸುಧಾರಿಸುವ ಕಾರ್ಯಕ್ರಮಗಳ ಜತೆಗೆ  ಹಲವು ಸಾಮಾಜಿಕ ಕಾರ್ಯಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕೃಷಿ ಅಧಿಕಾರಿ ಪ್ರಭಾಕರ ಗೌಡ ಮಾತನಾಡಿ, ವಿದ್ಯಾರ್ಥಿಗಳ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳವತ್ತ ಹೆಜ್ಜೆ ಹಾಕಬೇಕು ಎಂದರು. ಶಾಲೆಯ ಮುಖ್ಯಾಧ್ಯಾಪಕ ಡಾ.ಗಣೇಶ ಬಿಷ್ಟಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಸದಸ್ಯೆ ದಿವ್ಯಾ ದೇವಿದಾಸ ನಾಯ್ಕ ,ಸೇವಾ ಪ್ರತಿನಿಧಿ ಸೈದಮ್ಮ ನದಾಫ್ ಉಪಸ್ಥಿತರಿದ್ದರು. ಪರಿಸರ ಕಾರ್ಯಕ್ರಮ ಅಂಗವಾಗಿ ಸಸಿಗಳನ್ನು ನೆಡಲಾಯಿತು.ಹಾಗೂ ಪ್ರಬಂಧ, ಚಿತ್ರಕಲೆ, ಎಲೆ ಗುರುತಿಸುವಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸೋನಾಲಿ ಸಂಗಡಿಗರು ಪ್ರಾರ್ಥಿಸಿದರು.ಶಿಕ್ಷಕರಾದ ವಿಜಯಕುಮಾರ್ ನಾಯ್ಕ ಸ್ವಾಗತಿಸಿದರು, ಜೆ.ಬಿ.ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.