ಜಿಲ್ಲೆ

ಪಟಾಕಿ ನಿಷೇಧಿಸಲು ಬಿಎಸ್​ಪಿ ಆಗ್ರಹ

ಚಿಕ್ಕಮಗಳೂರು: ಪರಿಸರ ಮಾಲಿನ್ಯ ಮತ್ತು ಬೆಂಕಿ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪಟಾಕಿ ನಿಷೇಧಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಗುರುವಾರ ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಅವರಿಗೆ ಮನವಿ ಸಲ್ಲಿಸಿತು.

ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸುವುದರಿಂದಾಗಿ ಪರಿಸರ ಮತ್ತು ವಾಯು ಮಾಲಿನ್ಯ ಉಂಟಾಗಿ ಸಾರ್ವಜನಿಕರ ಆರೋಗ್ಯ ಹಾಳಾಗುತ್ತಿದೆ. ಪಟಾಕಿ ಸಿಡಿಸುವ ವೇಳೆ ಅನಾಹುತವಾಗಿ ರಾಜ್ಯಾದ್ಯಂತ ಹಲವಾರು ಮಕ್ಕಳು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಹಳಷ್ಟು ಜನ ಕಣ್ಣು ಕಳೆದುಕೊಂಡಿದ್ದಾರೆ. ಪಟಾಕಿ ತಯಾರಿಸುವ ಕಂಪನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಮತ್ತು ಮಕ್ಕಳು ದುಡಿಯುತ್ತಿದ್ದು ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಇವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪಟಾಕಿ ನಿಷೇಧಿಸಬೇಕು. ಅದರ ಬದಲಿಗೆ ಮನೆ ಮುಂದೆ ದೀಪ ಹಚ್ಚುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಬಿಎಸ್​ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಖಜಾಂಚಿ ವಾಹೀದ್ ಜಾನ್, ತಾಲೂಕು ಅಧ್ಯಕ್ಷ ಹರೀಶ್ ಮಿತ್ರ, ನಗರಾಧ್ಯಕ್ಷ ಹನುಮಂತರಾಯ, ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ, ಕೆ.ಎಸ್.ಮಂಜುಳಾ, ನವೀನ್, ಗಿರೀಶ್, ಹೊನ್ನಪ್ಪ ಇದ್ದರು.