ಬೆಂಗಳೂರು: ಕೈಗಾರಿಕೆಗಳಿಂದ ಉತ್ಪಾದನೆಯಾಗುವ ತ್ಯಾಜ್ಯ ವಿಲೇವಾರಿ ಸಂಬಂಧಪಟ್ಟಂತೆ ಇನ್ನಷ್ಟು ಜಾಗೃತಿ ಮೂಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ‘ರೀ ಕಾಮರ್ಸ್ ಎಕ್ಸ್ ಪೋ’ ಸಮಾವೇಶಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಉತ್ಪಾದನೆಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಮರು ಸಂಸ್ಕರಣೆ ಮಾಡುವುದು ಕೈಗಾರಿಕೆಗಳ ಜವಾಬ್ದಾರಿ.ಇದರ ಬಗ್ಗೆ ಅಸ್ಥಿತ್ವದಲ್ಲಿರುವ ಕಾಯ್ದೆ ಅನುಷ್ಠಾನಗೊಳಿಸಲು ಎಲ್ಲ ಪಾಲುದಾರರನ್ನು ವಿಶ್ವಾಸಕ್ಕೆ ಪಡೆದು ಅರಿವು ಮೂಡಿಸಲಾಗುವುದು. ಬೆಂಗಳೂರು ಜಾಗತಿಕ ಐಟಿ ರಾಜಧಾನಿಯಾಗಿದೆ. ಹೀಗಾಗಿ, ಇಲ್ಲಿ ಉತ್ಪಾದನೆಯಾಗುವ ಇ-ತ್ಯಾಜ್ಯ ನಿವಾರಣೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಆರೋಗ್ಯ ಸಮಸ್ಯೆ ಎದುರಾಗಲಿವೆ. ತ್ಯಾಜ್ಯ ವಿಲೇವಾರಿಗೆ ಉತ್ಪಾದನಾ ವಲಯದ ವಿಸ್ತೃತ ಜವಾಬ್ದಾರಿ ಕಾಯ್ದೆ ಜಾರಿಗೊಳಿಸಿದರೆ ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಬೇಕಿದೆ. ಇದಕ್ಕಾಗಿ ವಿಶೇಷ ಸಂಸ್ಕರಣಾ ವಲಯದಲ್ಲಿ ಕಾರ್ಯನಿರ್ವಹಿಸಲಿರುವ ಕೈಗಾರಿಕೆಗಳಿಗೆ ಸರ್ಕಾರ, ಸೂಕ್ತ ಸಹಕಾರ ಮತ್ತು ನೆರವು ನೀಡಲಿದೆ. ಕರ್ನಾಟಕವನ್ನು ಪರಿಸರ ಸ್ನೇಹಿಯಾಗಿ ಮಾಡುವ ಜತೆಗೆ ಈ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಅನೇಕ ಕೈಗಾರಿಕೋದ್ಯಮಗಳು ಒಂದುಗೂಡಿ ರೀ ಕಾಮರ್ಸ್ ಎಕ್ಸ್ ಪೋ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಸಚಿವರು ಶ್ಲಾಸಿದರು.
ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್, ಶರಣ ಬಸಪ್ಪ ದರ್ಶನಾಪುರ್, ರೀ ಕಾರ್ಮಸ್ ಏಕ್ಸ್ ಪೋ ಅಯೋಜಕ ವೆಂಕಟ್ ರೆಡ್ಡಿ ಪಾಟೀಲ್ ಮತ್ತಿತರರಿದ್ದರು.