ಜಿಲ್ಲೆ

ಪ್ರಜ್ಞಾವಂತರಾಗಿ ಪರಿಸರ ಉಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಕರೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ ಪರಿಸರವನ್ನು ಉಳಿಸಬೇಕು. ಪ್ರತಿ ಮನೆಗಳಲ್ಲೂ ಕೂಡ ಮಕ್ಕಳಿಗೆ ಪರಿಸರವನ್ನು ಉಳಿಸುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಮಿಮ್ಸ್‌ನ ಇಎನ್‌ಟಿ ವಿಭಾಗದ ಉಪನ್ಯಾಸ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಿಮ್ಸ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಉದ್ಘಾಟಿಸಿ ಹಾಗೂ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಜಗತ್ತು ಸೌಂಧರ್ಯವಾಗಿರಬೇಕು ಎಂದರೆ ಮೊದಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ನಾವು ಸುಂದರವಾಗಿ ಇದ್ದರೆ ಸಾಲದು. ನಮಗೆ ಗಾಳಿ, ಬೆಳಕು ನೀಡುವ ಪರಿಸರವನ್ನು ನಾಶವಾಗದಂತೆ ನೋಡಿಕೊಳ್ಳಬೇಕು ಎಂದರು.

ನಮ್ಮ ಮುಂದಿನ ಭವಿಷ್ಯ ಚೆನ್ನಾಗಿ ಇರಬೇಕು. ಅಂದರೆ ಮೊದಲು ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ನಮ್ಮ ಸಂಸ್ಕೃತಿಯನ್ನು ನಶಿಸಿ ಹೋಗದಂತೆ ಕಾಪಾಡಿಕೊಳ್ಳಬೇಕು. ಸಂಸ್ಕೃತಿ ಹಾಗೂ ಪರಿಸರ ಉಳಿದರೆ ಮುಂದಿನ ಪೀಳಿಗೆಯ ಜೀವನದ ಕೂಡ ಸುಖಕರವಾಗಿರುತ್ತದೆ. ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ಆತನ ದುರ್ಬುದ್ಧಿಯಿಂದಾಗಿ ಪರಿಸರ ನಾಶವಾಗುತ್ತಿದೆ. ಇದೇ ಮುಂದುವರೆಯುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಗೆ ಟಿವಿಗಳಲ್ಲಿ ತೋರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮಾನವ ತನ್ನ ಅಹಂನಿಂದ ಮರ ಗಿಡಗಳನ್ನು ನಾಶ ಮಾಡಿ ಮೂರ್ಖನಾಗದೇ ನಾನು ಎನ್ನುವ ಗರ್ವ ಬಿಟ್ಟು ಪರಿಸರ ರಕ್ಷಿಸುವಲ್ಲಿ ಮುಂದಾಗಬೇಕು. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ. ಆದ್ದರಿಂದ ಪ್ರಕೃತಿಯ ಒಂದಂಶದ ನಾವುಗಳು ಪ್ರಕೃತಿಯ ಉಳಿವಿಗೆ ಕಾರಣವಾಗಬೇಕೆ ವಿನಃ, ಪ್ರಕೃತಿಯ ಅಳಿವಿಗೆ ಕಾರಣವಾಗಬಾರದು. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿ ಪರಿಸರ ರಕ್ಷಣೆ ಮಾಡಬೇಕೆಂದು ಮನದಟ್ಟು ಮಾಡಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಿಮ್ಸ್ ಡಾ.ಪಿ.ನರಸಿಂಹಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ವಿಜ್ಞಾನ ಸಂವಹನಕಾರ ಎಸ್.ಲೋಕೇಶ್, ಉಪಪರಿಸರ ಅಧಿಕಾರಿಗಳಾದ ಭವ್ಯಾ, ಅಶ್ವಿನಿ, ಸೊಸೈಟಿ ಅಧ್ಯಕ್ಷ ಮಂಗಲ ಯೋಗೀಶ್ ಇತರರಿದ್ದರು.