ಜಿಲ್ಲೆ

ಆ.6ರಂದು ಹೊನ್ನೇಬೆಟ್ಟದಲ್ಲಿ ವಿಶ್ವ ಪರಿಸರ ದಿನ: ಬೆಂಗಳೂರಿನ ಮಾತೃ ಫೌಂಡೇಷನ್‌ನ ಸಂಸ್ಥಾಪಕ ಆರ್.ಚಂದ್ರಕುಮಾರ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನಾಗಮಂಗಲ ತಾಲೂಕು ಹೊಸೂರು ಗ್ರಾಮದ ಹೊನ್ನೇಬೆಟ್ಟದಲ್ಲಿ ಆ.6ರಂದು ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಮಾತೃ ಫೌಂಡೇಷನ್‌ನ ಸಂಸ್ಥಾಪಕ, ವಕೀಲ ಆರ್.ಚಂದ್ರಕುಮಾರ್ ತಿಳಿಸಿದರು.

ಬೆಂಗಳೂರು ವಕೀಲರ ಸಂಘ, ಮಂಡ್ಯ ಜಿಲ್ಲೆಯ ಎಲ್ಲ ತಾಲೂಕುಗಳ ವಕೀಲರ ಸಂಘ ಹಾಗೂ ನಾಗಮಂಗಲ ಸರ್ಕಾರಿ ಜೂನಿಯರ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಮೈಸೂರು-ನಾಗಮಂಗಲ ರಸ್ತೆಯ ಎರಡೂ ಬದಿಗಳಲ್ಲಿ ಸಸಿಗಳನ್ನು ನೆಟ್ಟು, ಜನರಿಗೆ ನೆರಳಿನ ಸೌಲಭ್ಯ ಕಲ್ಪಿಸುವುದು ಹಾಗೂ ಪರಿಸರ ಸಂರಕ್ಷಣೆಯು ಕಾರ್ಯಕ್ರಮದ ಉದ್ದೇಶವಾಗಿದೆ. ಹೈಕೋರ್ಟ್ ನ್ಯಾಯಾಧೀಶರಾದ ಬಿ.ಎಂ.ಶ್ಯಾಂಪ್ರಸಾದ್, ಎಚ್.ಟಿ.ನರೇಂದ್ರಪ್ರಸಾದ್, ಎಚ್.ರಾಚಯ್ಯ, ಟಿ.ಜಿ.ಶಿವಶಂಕರೇಗೌಡ, ವಿಜಯ್‌ಕುಮಾರ್ ಎ.ಪಾಟೀಲ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಜಿ.ರಮಾ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು, ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೇನ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ವಕೀಲರ ಸಂಘಗಳ ಅಧ್ಯಕ್ಷರು ಭಾಗವಹಿಸುವರು ಎಂದು ವಿವರಿಸಿದರು.

ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಫೌಂಡೇಷನ್‌ನ ಸಂಸ್ಥಾಪಕ ಟ್ರಸ್ಟಿಗಳಾದ ಎನ್.ಆರ್.ಮಾಯಣ್ಣಗೌಡ, ಎನ್.ವಿ.ಹರೀಶ್, ವಿ.ಆರ್.ಬಾಲರಾಜು ಇದ್ದರು.