ಮೊಳಕಾಲ್ಮೂರು: ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕನ ಮಾದರಿಯಲ್ಲಿ ಪರಿಸರ ಸಂರಕ್ಷಣೆಗೆ ಸರ್ವರೂ ಮುಂದಾಗಬೇಕಿದೆ ಎಂದು ಸಿಪಿಐ ಜೆ.ಬಿ.ಉಮೇಶ್ ಹೇಳಿದರು.
ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕ ಕಚೇರಿ ಆವರಣದಲ್ಲಿ ಶುಕ್ರವಾರ ಪೊಲೀಸ್ ಹಾಗೂ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವನ ಮಹೋತ್ಸವದಲ್ಲಿ ಮಾತನಾಡಿದರು.
ಅನಕ್ಷರಸ್ಥೆಯಾಗಿದ್ದರೂ ತಿಮ್ಮಕ್ಕ ಅವರು ಸಾವಿರಾರು ಮರಗಳ ಪಾಲನೆ ಮಾಡಿದ್ದಾರೆ. ಅವರ ಈ ಸೇವೆ ದೇಶದ ಉದ್ದಗಲಕ್ಕೂ ಪಸರಿಸಿದೆ ಎಂದರು.
ಕಾಡು ನಾಶದಿಂದ ಉಂಟಾಗಿರುವ ಅಸಮತೋಲನ ನಿವಾರಣೆಗೆ ಜೀವ ವೈವಿಧ್ಯತೆಯ ಮರುಸೃಷ್ಟಿ ಆಗಬೇಕಿದೆ. ಇದರಿಂದ ಶುದ್ಧ ಗಾಳಿ, ನೀರು ಸಿಗಲು ಸಾಧ್ಯ. ದಿನದ 24 ಗಂಟೆಯೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೊಲೀಸರು ಸಹಿತ ಸರ್ವರೂ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಅರಣ್ಯಾಧಿಕಾರಿ ಹಸನ್ ಖಾನ್ ಮಾತನಾಡಿ, ಅರಣ್ಯ ಉಳಿವು ಜೀವಸಂಕುಲಕ್ಕೆ ಆಧಾರವಾಗಲಿದೆ. ಮರಗಿಡಗಳ ಬುಡಕ್ಕೆ ಕೊಡಲಿ ಪೆಟ್ಟು ಹಾಕಿ ನೆಲಕ್ಕುರುಳಿಸುವುದು ಸುಲಭ. ಆದರೆ, ಅದೇ ಗಿಡವನ್ನು ನೆಟ್ಟು ಪೋಷಣೆ ಮಾಡುವ ಜವಾಬ್ದಾರಿ ದೊಡ್ಡದಿದೆ ಎಂದು ತಿಳಿಸಿದರು. ಪಪಂ ಸದಸ್ಯರಾದ ಮಂಜುನಾಥ, ನಿಬಿಲ್, ರಘು, ಎಎಸ್‌ಐಗಳಾದ ಜಯ್ಯಣ್ಣ, ದಾದಾಪೀರ್, ಪೊಲೀಸರಾದ ದೇವರಾಜ್, ರಮೇಶ್, ಭೀಮಣ್ಣ, ಸುರೇಶ್, ಸುಧೀರ್, ಸಂಗೀತ ಶಿಕ್ಷಕ ಶಿವಣ್ಣ, ಬೋರಯ್ಯ ಇತರರಿದ್ದರು.
2.50 ಲಕ್ಷ ಸಸಿ: ಈ ವರ್ಷ ದೇಶದ ಉದ್ದಗಲಕ್ಕೂ ಸುರಿದ ಉತ್ತಮ ಮಳೆಯಿಂದ ನದಿ, ಸರೋವರ, ಕೆರೆ, ಕಟ್ಟೆಗಳು ತುಂಬಿವೆ. ತಾಲೂಕಿನ ಅರಣ್ಯ ಪ್ರದೇಶದಲ್ಲಿ ಈ ವರ್ಷ 2.50 ಲಕ್ಷ ಸಸಿ ನೆಡಲಾಗಿದೆ. ಸರ್ಕಾರಿ ಕಚೇರಿಗಳು, ಶಾಲಾ ಆವರಣ, ಜಮೀನುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಲು ಪ್ರಚಾರ ಆಂದೋಲನ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿ ಹಸನ್ ಖಾನ್ ತಿಳಿಸಿದರು.