ಚನ್ನಗಿರಿ: ನಾವು ಕಾಡನ್ನು ಉಳಿಸಿ ಬೆಳೆಸಿದರೆ, ಕಾಡು ನಮ್ಮನ್ನು ಉಳಿಸಿ ಬೆಳೆಸುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ತಾವರೆಕೆರೆ ಗ್ರಾಮದ ಸೇವಾ ಭಾರತೀ ಹಾಗೂ ಶಿಲಾಮಠದ ಸಹಯೋಗದಲ್ಲಿ ಗ್ರಾಮದಲ್ಲಿ ಪರಿಸರ ದಿನಕ್ಕೆ ರಸ್ತೆ ಬದಿ ಸಸಿ ನೆಡುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಅರಣ್ಯ ಕಡಿದ ಪರಿಣಾಮ ಜನರು ಇಂದು ಬರಗಾಲ ಅನುಭವಿಸುವಂತಾಗಿದೆ. ಮಳೆ ಇಲ್ಲದೆ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತಿವೆ. ಆದ್ದರಿಂದ ಇನ್ನಾದರೂ ನಾವು ಜಾಗೃತರಾಗಿ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಗೌತಮ್ ಜಿ. ಜೋಗಳೆಕರ್, ಶ್ರೀಕಾಂತ್, ಮಂಜುನಾಥ್, ದುರ್ವಿಗೆರೆ ಎಸ್‌ಬಿಐ ಸೇವಾ ಕೇಂದ್ರದ ವ್ಯವಸ್ಥಾಪಕ ಎಂ.ಎಸ್. ಪ್ರಕಾಶ್, ಬ್ಯಾಂಕ್ ಸಿಬ್ಬಂದಿ ನವೀನ್, ರಾಕೇಶ್ ಇದ್ದರು.