ಉಡುಪಿ ಪೇಜಾವರಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಬಾಗಲಕೋಟೆಗೆ ಸ್ವಾಗತಿಸಲಾಯಿತು. 
ಜಿಲ್ಲೆ

ಪೇಜಾವರ ಶ್ರೀಗಳ ಪುರ ಪ್ರವೇಶ

ಬಾಗಲಕೋಟೆ: ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ 8 ದಿನ ನಗರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳನ್ನು ಶೋಭಾಯಾತ್ರೆ ಮೂಲಕ ಶುಕ್ರವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರಕ್ಕೆ ಮಧ್ಯಾಹ್ನ ಶ್ರೀಗಳು ಆಗಮಿಸಿದ ನಂತರ ತೆಗ್ಗಿಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಪ್ರರ ಮನೆಗಳಲ್ಲಿ ಪಾದಪೂಜೆ ನೆರವೇರಿಸಲಾಯಿತು. ನಂತರ ಸಂಜೆ ವಿದ್ಯಾಗಿರಿಯ ಕಾಲೇಜು ವೃತ್ತದಿಂದ ವಿಪ್ರ ಅಭಿವೃದ್ಧಿ ಸಂಘದ ರಾಯರ ಮಠದವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಬೆಳ್ಳಿಲೇಪಿತ ಸಾರೋಟದಲ್ಲಿ ಶ್ರೀಗಳನ್ನು ಕರೆತರಲಾಯಿತು.

ಕರಡಿಮಜಲು, ಮಹಿಳಾ ಮಂಡಳಿಗಳ ಭಜನೆ ಮೆರವಣಿಗೆಗೆ ಮೆರುಗು ತುಂಬಿತು. ಮಾರ್ಗದುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಶ್ರೀಗಳ 60ನೇ ವರ್ಧಂತಿ ಉತ್ಸವ ಪ್ರಯುಕ್ತ ಜೂ.27ರವರೆಗೆ ನಿತ್ಯ ರಾಮವಿಠ್ಠಲ ದೇವರ ಪೂಜೆ, ಪ್ರವಚನ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತರ ಮನೆಗಳಲ್ಲಿ ಪಾದಪೂಜೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಗಳ ಆಗಮನದಿಂದ ವಿದ್ಯಾಗಿರಿಯಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ.

ಚತುರ್ವೇದ ಅಧ್ಯಯನ ಮಾಡಿದ ಸಂತ

ಮೆರವಣಿಗೆ ನಂತರ ವಿಪ್ರ ಅಭಿವೃದ್ಧಿ ಸಂಘದ ರಾಯರ ಮಠದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಸ್ವಾಗತಿಸಿ ಪಂ.ಆನಂದತೀಥಾಚಾರ್ಯ ನಾಗಸಂಪಗಿ ಪ್ರವಚನ ನೀಡಿದರು. ನಾಲ್ಕೂ ವೇದಗಳನ್ನು ಶ್ರೀಗಳು ಅಧ್ಯಯನ ಮಾಡಿದಲ್ಲದೆ, ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪಂಡಿತರಿಗೆ ಪಾಠ ಮಾಡಿದ್ದಾರೆ ಎಂದರು.

ಅಯೋಧ್ಯೆ ರಾಮಮಂದಿರದ ನಾಲ್ಕು ದ್ವಾರಗಳಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಶ್ರೀಗಳು ಮಧ್ವಾಚಾರ್ಯರ ಹೆಸರು ಶಿಫಾರಸು ಮಾಡಿದರು. ಅದನ್ನು ಎಲ್ಲರೂ ಒಪ್ಪಿದರು. ಶ್ರೀಗಳು ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ಮಾತನಾಡಿದರೆ ಇಡೀ ಜಗತ್ತೇ ಒಪ್ಪುವಂಥ ಪ್ರಭಾವವನ್ನು ಹೊಂದಿದ್ದಾರೆ ಎಂದು ಹೇಳಿದರು.

ಶ್ರೀಗಳನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಭೇಟಿ ಮಾಡಿ ಆಶೀರ್ವಾದ ಪಡೆದರು. ಸಂಜೆ ನಡೆದ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಡಾ.ಶೇಖರ ಮಾನೆ ಮತ್ತಿತರರು ಸ್ವಾಗತಿಸಿ ಪಾಲ್ಗೊಂಡರು. ಪಂ.ರಘೋತ್ತಮಾಚಾರ್ಯ ನಾಗಸಂಪಗಿ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಪಂ.ಬಿಂದುಮಾಧವಾಚಾರ್ಯ ನಾಗಸಂಪಗಿ, ಪಂ.ನವೀನಾಚಾರ್ಯ ಜೋಶಿ, ಪಂ.ಪ್ರಮೋದಾಚಾರ್ಯ ಆಲೂರ, ಪಂ.ವಿಜಯೇಂದ್ರಾಚಾರ್ಯ ಯತ್ನಟ್ಟಿ, ಪಂ. ಆದಿಶೇಷಾಚಾರ್ಯ ಯಲಗೂರ, ಮದ್ವೇಶಾಚಾರ್ಯ ಹಿಪ್ಪರಗಿ, ರಾಮಾಚಾರ್ ದೇಸಾಯಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಸ್.ಬಿ.ಸತ್ಯನಾರಾಯಣ, ಅಧ್ಯಕ್ಷ ರಾಘವೇಂದ್ರ ರಾವ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಗುರುರಾಜ ಗೊಂಬಿ, ನರಸಿಂಹ ಆಲೂರ, ನಾರಾಯಣ ದೇಸಾಯಿ, ಪವನ ಸೀಮಿಕೇರಿ, ಸಂತೋಷ ಗದ್ದನಕೇರಿ, ನಾರಾಯಣ ತಾಸಗಾಂವ, ಕಿರಣ ಕುಲಕರ್ಣಿ, ಪ್ರದೀಪ ಪರ್ವತಿಕರ, ಮುಕುಂದ ಕುಲಕರ್ಣಿ, ಶ್ರೀಹರಿ ಪಾಟೀಲ, ಡಿ.ಬಿ.ಕುಲಕರ್ಣಿ, ಶಶಿ ದೇಶಪಾಂಡೆ, ಎಸ್.ಕೆ.ಕುಲಕರ್ಣಿ, ವೆಂಕಟೇಶ ದೇಶಪಾಂಡೆ, ಭಾಸ್ಕರ ಮನಗೂಳಿ, ಸಂಜೀವ ಗುಡಿ, ಗಿರೀಶ ಆಶ್ರೀತ, ಡಾ.ಪವನ ಕುಲಕರ್ಣಿ, ಅನಂತ ಮಳಗಿ, ವಿನಾಯಕ ದೇಸಾಯಿ, ಪಾಂಡುರಂಗ ಹೊಸೂರ, ಪವನ ಮಂಕಣಿ, ಕೇಶವ ಕುಲಕರ್ಣಿ ಮತ್ತಿತರರು ನೇತೃತ್ವ ವಹಿಸಿದ್ದರು.