ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರ ಮೇಲೆ ಜೇನು ಹುಳಗಳು ದಾಳಿ ಮಾಡುತ್ತಿವೆ. ಜೇನುಹುಳುಗಳ ದಾಳಿಯಿಂದ 35 ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದಾರೆ. ಜೇನುಹುಳುಗಳಿಂದ ಅಪಾಯವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಪ್ರವೇಶವನ್ನು ಅನಿರ್ದಿಷ್ಟಾವಧಿಯವರೆಗೆ ನಿರ್ಬಂಧಿಸಲಾಗಿದೆ.
ಸಾತೊಡ್ಡಿ ಜಲಪಾತದ ಅಕ್ಕಪಕ್ಕ ಅನೇಕ ಜೇನುಗೂಡು ಗಳಿವೆ. ಪ್ರವಾಸಕ್ಕೆ ಬಂದ ಯಾರೋ ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಬೀಸಿದ ಪರಿಣಾಮ ಜೇನುಹುಳಗಳು ಒಮ್ಮಲೆ ಪ್ರವಾಸಿಗರ ಮೇಲೆ ದಾಳಿ ಮಾಡಿವೆ. ಅನೇಕರು ಓಡಿ ತಪ್ಪಿಸಿಕೊಂಡರು' ಎಂದು ಸ್ಥಳೀಯರು ತಿಳಿಸಿದ್ದಾರೆ.
ಜೇನುಹುಳಗಳು 35ಕ್ಕೂ ಹೆಚ್ಚು ಜನರಿಗೆ ಕಚ್ಚಿವೆ. ಅದರಲ್ಲಿ ನಾಲ್ವರಿಗೆ ಹೆಚ್ಚಿನ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೇನುಹುಳಗಳಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪಟ್ಟಣದ ಬಿಸಗೋಡ ಕ್ರಾಸ್ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿ ನಿಂತು, ಪ್ರವಾಸಿಗರನ್ನು ಮರಳಿ ಕಳುಹಿಸುತ್ತಿದ್ದಾರೆ. ಭಾನುವಾರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ದೂರದ ಊರುಗಳಿಂದ ಬಂದಿದ್ದು, ಎಲ್ಲರೂ ನಿರಾಸೆಯಿಂದ ಮರಳುವಂತಾಯಿತು.
ಇದನ್ನೂ ಓದಿ: ಮೃತ ವೃದ್ಧೆಯ ಕಣ್ಣುಗಳನ್ನು ದಾನ ಮಾಡಿದ ಮಕ್ಕಳು