ಮಹಾಲಿಂಗಪುರ: ಸನ್ಮಾರ್ಗದ ಮಹತ್ವ ಅರಿಯುವ ಮೂಲಕ ಜೀವನದಲ್ಲಿ ಒಳ್ಳೆಯ ಕೆಲಸ ಮಾಡುವುದರ ಜತೆಗೆ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದು ಜಾನಪದ ಕಲಾವಿದ ಶಬ್ಬೀರ ಡಾಂಗೆ ಹೇಳಿದರು.
ಸ್ಥಳೀಯ ಕೆಎಲ್‌ಇ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಸಕ್ಕತಿಕ ಸಂಭ್ರಮ 2025ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಪ್ರೀತಿ, ವಾತ್ಸಲ್ಯವಿರಬೇಕು. ತಂದೆ ತಾಯಿಯ ಪ್ರೀತಿ ಎಲ್ಲ ಭಾಗ್ಯಕ್ಕಿಂತ ದೊಡ್ಡದು ಎಂದರು.
ಪ್ರಾಚಾರ್ಯ ಡಾ. ಕೆ.ಎಂ. ಅವರಾದಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ರಂಗಗಳಲ್ಲಿ ಹೆಸರು ಮಾಡಬೇಕು. ಚೆನ್ನಾಗಿ ಓದುವುದರಿಂದ ಬುದ್ಧಿ ಬೆಳವಣಿಗೆ ಆಗುತ್ತದೆ. ಉತ್ತಮ ಅವಕಾಶ ಪಡೆದು ಗೌರವಿತವಾಗಿ ಬಾಳಿ ಎಂದರು.
ಮೂರು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿನಿಯರು ಹಲವಾರು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಕೊನೆಯ ದಿನ ಹಳ್ಳಿ ಸೊಬಗು ಅನಾವರಣಗೊಳಿಸುವ ಮೂಲಕ ಎತ್ತಿನಬಂಡಿ, ಕುದುರೆ, ಬ್ಯಾಂಡ್ ಬಾರಿಸಿಕೊಂಡು ಕಾಲೇಜಿನಿಂದ ಬಸವೇಶ್ವರ ಸರ್ಕಲ್, ಡಬಲ್ ರೋಡ್‌ನಲ್ಲಿ ಮೆರವಣಿಗೆ ಜರುಗಿತು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಶಬ್ಬೀರ ಡಾಂಗೆ ಅವರಿಂದ ಜಾನಪದ ಹಾಡುಗಳ ಕಾರ್ಯಕ್ರಮ ನೆರವೇರಿತು.
ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ. ಕುಂದಗೋಳ, ಅಶೋಕ ಅಂಗಡಿ, ಎಸ್.ಬಿ. ಹುದ್ದಾರ, ಎಲ್.ಬಿ. ತುಪ್ಪದ, ಬಿ.ಎಂ. ಅರಕೇರಿ, ಡಾ. ಎಸ್.ಡಿ. ಸೋರಗಾಂವಿ, ಮಹೇಶ ಮನ್ನಯ್ಯನರಮಠ ಮತ್ತಿತರರಿದ್ದರು.