ಮಡಿಕೇರಿ: ಆನ್‌ಲೈನ್ ಫಾರಂ ೩ ಪಡೆಯದ ಮಡಿಕೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಆಸ್ತಿ ಮಾಲೀಕರು ಆಸ್ತಿ ಕಣಜ ತಂತ್ರಾಂಶದಲ್ಲಿ ನಿಮ್ಮ ಮಾಲೀಕತ್ವದ ಸ್ವತ್ತಿನ ದಾಖಲೆಗಳನ್ನು ೧೫ ದಿವಸದೊಳಗೆ ನಗರಸಭೆಗೆ ನೀಡಿ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ವಿಜಯ ಪ್ರಕಟಣೆಯಲ್ಲಿ ಮನವಿ ಕೋರಿದ್ದಾರೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೯೫೪೩ ಆಸ್ತಿಗಳು ಇದ್ದು, ಈ ಪೈಕಿ ಈಗಾಗಲೇ ೪೬೫೩ ಆಸ್ತಿಗಳಿಗೆ ಆಸ್ತಿಯ ಮಾಲೀಕರು ನಿಯಮಾನುಸಾರ ಅವಶ್ಯವಿರುವ ದಾಖಲೆಗಳನ್ನು ಹಾಜರುಪಡಿಸಿ ನಮೂನೆ-೩/ ಫಾರಂ-೩ ಪಡೆದುಕೊಂಡಿದ್ದಾರೆ. ೪೮೯೦ ಆಸ್ತಿಗಳ ಮಾಲೀಕರು ಆನ್‌ಲೈನ್ ಡಿಜಿಟಲ್ ಸಹಿ ಇರುವ ನಮೂನೆ-೩ ಫಾರಂ ೩ ಯನ್ನು ಪಡೆದುಕೊಂಡಿರುವುದಿಲ್ಲ. ತಂತ್ರಾಂಶವನ್ನು ಸರಳೀಕರಣ ಮಾಡಿ ನಾಗರಿಕರಿಗೆ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಆಸ್ತಿ ಕಣಜ ತಂತ್ರಾಂಶ ಬಿಡುಗಡೆ ಮಾಡಿದ್ದು, ನಗರಸಭೆ ವ್ಯಾಪ್ತಿಯ ಪ್ರತಿ ಆಸ್ತಿ ವಿವರಗಳು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಆಗಬೇಕಿದೆ ಎಂದು ತಿಳಿಸಿದ್ದಾರೆ.
ತೆರಿಗೆ ಪಾವತಿ ವಿವರಗಳು, ಕಟ್ಟಡ ಇದ್ದಲ್ಲಿ ಕಟ್ಟಡ ಪರವಾನಿಗೆ ಪ್ರತಿ, ಕಟ್ಟಡದ ಫೋಟೋ, ನೀರಿನ ತೆರಿಗೆ ಪಾವತಿ ಪ್ರತಿ, ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಹೊಂದಿರುವ ಆರ್‌ಆರ್ ನಂಬರ್, ಸ್ವತ್ತಿನ ಮಾಲಿಕರ ಫೋಟೋ ಮತ್ತು ಮೊಬೈಲ್ ನಮೂದಿಸಬೇಕು. ಈ ದಾಖಲೆಗಳನ್ನು ೧೫ ದಿವಸದೊಳಗೆ ನಗರಸಭೆಗೆ ನೀಡಿ ಸಹಕರಿಸುವಂತೆ ನಗರಸಭೆ ಪೌರಾಯುಕ್ತರಾದ ವಿಜಯ ಕೋರಿದ್ದಾರೆ.