ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಡಿಎಚ್‌ಒ ಡಾ. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳಾ ದೇವಿ ಮತ್ತಿತರರು ಇದ್ದರು. 
ಜಿಲ್ಲೆ

ಶುದ್ಧ ನೀರು ಪೂರೈಕೆಯ ಖಾತ್ರಿ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಡಿಎಚ್‌ಒ ಡಾ. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳಾ ದೇವಿ ಮತ್ತಿತರರು ಇದ್ದರು.

ಎನ್.ವೆಂಕಟೇಶ್

ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ -ಅವಘಡ ಸಂಭವಿಸದಂತೆ ಎಚ್ಚರ ವಹಿಸಿ - ಕಾಲಕಾಲಕ್ಕೆ ಮಾದರಿ ಪರೀಕ್ಷೆ ಮಾಡಿ

ಚಿಕ್ಕಬಳ್ಳಾಪುರ: ಮೈಸೂರಿನ ಕೆ.ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಒಬ್ಬರು ಮೃತಪಟ್ಟು ಹಲವರು ಅಸ್ವಸ್ಥಗೊಂಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಶುದ್ಧ ಕುಡಿಯುವ ನೀರು ಪೂರೈಕೆಯ ಖಾತ್ರಿ, ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸುವಂತೆ ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಸೂಚಿಸಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಸಮರ್ಪಕವಾಗಿ ಗುಣಮಟ್ಟದ ಕುಡಿಯುವ ನೀರು ಪೂರೈಸಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಿದರು.

ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆ ಬೀಳುತ್ತಿದೆ. ಇದೇ ವೇಳೆ ಜನರಿಗೆ ಕಲುಷಿತಗೊಂಡ ನೀರು ಪೂರೈಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಆಯಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಿ ಶುದ್ಧತೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಕಾಲಕಾಲಕ್ಕೆ ಜಲಮೂಲಗಳನ್ನು ಪರಿಶೀಲಿಸಬೇಕು. ನೀರು ಪೂರೈಕೆಯ ಪೈಪ್‌ಗಳ ಸುಸ್ಥಿತಿ ಬಗ್ಗೆ, ಕುಡಿಯುವ ನೀರಿನ ಮಾದರಿ ಸಂಗ್ರಹ, ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ ಬಗ್ಗೆ ವರದಿ ಸಲ್ಲಿಸಬೇಕು. ಕಲುಷಿತ ನೀರಿನಿಂದ ಹರಡಬಹುದಾದ ಕಾಯಿಲೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರಬಾರದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳಾ ದೇವಿ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎನ್.ಪ್ರಕಾಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಸರ್ವೇಕ್ಷಣಾಕಾರಿ ಡಾ. ಕೃಷ್ಣಪ್ರಸಾದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ ಮತ್ತಿತರರು ಇದ್ದರು.


ಅಕ್ರಮ ಒತ್ತುವರಿ ತೆರವು
ಮಳೆ ಸಂದರ್ಭದಲ್ಲಿ ಚರಂಡಿಗಳಲ್ಲಿ ಸ್ವಚ್ಛತೆ ನಿರ್ವಹಣೆಯ ಮೂಲಕ ಮನೆಗಳಿಗೆ ನೀರು ನುಗ್ಗದಂತೆ ನೋಡಿಕೊಳ್ಳಲು ಮತ್ತು ರಾಜಕಾಲುವೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆದೇಶಿಸಲಾಗಿದೆ. ವಿವಿಧೆಡೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು. ತಗ್ಗು ಪ್ರದೇಶಗಳಲ್ಲಿ, ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.


ಸಾಂಕ್ರಾಮಿಕ ರೋಗಗಳ ತಡೆ
ಜಿಲ್ಲೆಯಲ್ಲಿ ಡೆಂ, ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ರೋಗ ತಡೆಗೆ ವಹಿಸಲಾಗಿರುವ ಕ್ರಮಗಳ ಕುರಿತು ಅನುಪಾಲನಾ ವರದಿ ಸಲ್ಲಿಕೆ, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳ ಪರಿಶೀಲನೆ, ರೋಗ ಪ್ರಕರಣಗಳು ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ, ಸೊಳ್ಳೆಗಳಿಂದ ಹರಡಬಹುದಾದ ರೋಗಗಳು, ಮಳೆ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಬಾರದಂತೆ ಶುಚಿತ್ವ ಕಾಪಾಡುವುದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ಪಡೆಯುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.


ಸ್ವಚ್ಛತೆ ನಿರ್ವಹಣೆ ಚರ್ಚೆ
ನಗರ, ಪಟ್ಟಣಗಳಲ್ಲಿ ಕಟ್ಟಡ ತ್ಯಾಜ್ಯ ಅವಶೇಷಗಳನ್ನು ಹೆದ್ದಾರಿ ಬದಿಗಳಲ್ಲಿ ಸುರಿಯುತ್ತಿರುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲೆಯ ಪ್ರತಿಯೊಂದು ಕಡೆಯೂ ವೈಜ್ಞಾನಿಕವಾಗಿ ಕಸ ವಿಲೇವಾರಿಯಾಗಬೇಕು. ತ್ಯಾಜ್ಯವನ್ನು ನಿಗದಿತ ಘಟಕದಲ್ಲಿಯೇ ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.


ಸಿಎಂ ಸೂಚನೆಗೆ ಜಿಲ್ಲಾಡಳಿತ ಅಲರ್ಟ್
ಮೈಸೂರಿನ ಕೆ.ಸಾಲುಂಡಿಯಲ್ಲಿ ಕಲುಷಿತ ನೀರಿನ ಸೇವನೆಯಿಂದಾದ ಅವಘಡಗಳು ಮರುಕಳಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ದು, ಒಂದು ವೇಳೆ ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸಿದಲ್ಲಿ ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಜಿಲ್ಲಾಡಳಿತ ಅಲರ್ಟ್ ಆಗಿದೆ.

24ಸಿಬಿಪಿ2:
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಡಿಎಚ್‌ಒ ಡಾ. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳಾ ದೇವಿ ಮತ್ತಿತರರು ಇದ್ದರು.