ವಿಜಯಪುರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.  
ಜಿಲ್ಲೆ

ಕುಡಿಯುವ ನೀರು ಅನ್ಯ ಕಾರ್ಯಕ್ಕೆ ಬಳಸದಂತೆ ನಿಗಾವಹಿಸಿ

ಗಿರೀಶ ಸಗರ

ವಿಜಯಪುರ: ಬೇಸಿಗೆಯಲ್ಲಿ ಜನ&ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸುವ ಸಂದರ್ಭದಲ್ಲಿ ಕುಡಿಯುವ ನೀರು ಅನ್ಯ ಕಾರ್ಯಕ್ಕೆ ಬಳಸದಂತೆ ಹಾಗೂ ನೀರು ಪೋಲಾಗದಂತೆ ನಿಗಾ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್​ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ವಿವಿಧ ತಾಲೂಕು ತಹಸೀಲ್ದಾರ್​, ತಾಪಂ ಇಒ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಜನ&ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯ ನೀರನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಜೂನ್​ವರೆಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆಯಲ್ಲಿ ಯಾವುದೇ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಟ್ಯಾಂಕರ್​ಗಳ ಮೂಲಕ ನೀರು ಪೂರೈಸುವ ಅವಶ್ಯಕತೆ ಇದ್ದಲ್ಲಿ ಮುಂಚಿತವಾಗಿ ಮಾಹಿತಿ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್​ ಬಳಕೆ ಮಾಡಬೇಕು ಎಂದರು.

ಬೇಸಿಗೆ ವೇಳೆ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಯಾವುದೇ ಅಡೆ&ತಡೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.

ಕುಡಿಯುವ ನೀರಿಗೆ ಹೆಸ್ಕಾಂ ವತಿಯಿಂದ ಸಮರ್ಪಕ ವಿದ್ಯುತ್​ ಪೂರೈಕೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಂಗನವಾಡಿಗಳು, ಸರ್ಕಾರಿ ಶಾಲೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.

ಸ್ವಂತ ಕಟ್ಟಡ ಹೊಂದಿರುವ ಹಾಗೂ ಬಾಡಿಗೆ ಅಂಗನವಾಡಿಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಒಂದು ವಾರದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ಒದಗಿಸಬೇಕು. ನೀರಿನ ಸಮಸ್ಯೆಯಿದ್ದಲ್ಲಿ ಪರಿಹರಿಸಿಕೊಂಡು ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡು ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿರುವ ವಿವಿಧ ವಸತಿ ನಿಲಯ, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಹಾಗೂ ನಿರಂತರ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕೈಗೊಂಡ ಕ್ರಮಗಳ ಕುರಿತು ಒಂದು ವಾರದೊಳಗೆ ನಿಖರ ಮಾಹಿತಿ ಒದಗಿಸಬೇಕು. ಮುಂದೆ ಕುಡಿಯುವ ನೀರಿನ ಏನಾದರೂ ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಎಲ್ಲ ಕಟ್ಟಡಗಳ ದುರಸ್ತಿಗೊಳಿಸಲು ಕ್ರಮ ವಹಿಸಬೇಕು. ಪೂರ್ಣ ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳ ಬದಲಾಗಿ ಪರ್ಯಾಯ ವ್ಯವಸ್ಥೆಗೆ ಕ್ರಮ ವಹಿಸಿ, ಜಿಲ್ಲೆಯಲ್ಲಿ ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚಲು ಮುಂದಾಗಬೇಕು.

ತೆರೆದ ಕೊಳವೆ ಬಾವಿಗಳ ಬಗ್ಗೆ ತೀವ್ರ ನಿಗಾವಹಿಸಿ ಅವುಗಳನ್ನು ಕೂಡಲೇ ಮುಚ್ಚಿಸಿ. ಹೊಸದಾಗಿ ಕೊಳವೆ ಬಾವಿ ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ ಮತ್ತಿತರರಿದ್ದರು.