ಜಿಲ್ಲೆ

ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್​.ಆರ್​. ಪಾಟೀಲ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳು, ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳ್ಳಿ ಭಾಗಗಳಿಗೆ ಸರಿಯಾಗಿ ಬಸ್​ ಸಂಚಾರದ ವ್ಯವಸ್ಥೆ ಕಲ್ಪಿಸಿ ಸಮಸ್ಯೆಯಾಗದಂತೆ ಗಮನಹರಿಸಿ. ಹು-ಧಾಕ್ಕೆ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಜನರು ಓಡಾಡುವುದರಿಂದ ಬೆಳಗ್ಗೆ ಹಾಗೂ ಸಂಜೆ ಸರಿಯಾಗಿ ಬಸ್​ಗಳ ಕಾರ್ಯಾಚರಣೆ ಆಗಬೇಕು. ಜನರಿಗೆ ತೊಂದರೆಯಾಗದಂತೆ ಬಸ್​ ವ್ಯವಸ್ಥೆಯಾಗಬೇಕು ಎಂದರು.

ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್​ ಪಡಿತರ ಚೀಟಿದಾರರಿಗೆ ನಿಯಮಾನುಸಾರ ಪಡಿತರ ವಿತರಣೆ ಮಾಡಲಾಗುತ್ತಿದೆ. ನೇರ ನಗದು ವರ್ಗಾವಣೆ ಮೂಲಕ ಹಣ ಸಂದಾಯ ಮಾಡಲಾಗುತ್ತಿದೆ ಎಂದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4,919 ಜನ ನೋಂದಣಿಯಾಗಿದ್ದು, 1,738 ಪುರುಷ ಹಾಗೂ 2,091 ಮಹಿಳೆಯರು ಸೇರಿ ಒಟ್ಟು 3,829 ಜನ ಫಲಾನುಭವಿಗಳಿಗೆ ಸಹಾಯಧನ ಜಮೆ ಆಗುತ್ತಿದೆ. 1,090 ಜನ ಫಲಾನುಭವಿಗಳ ಅರ್ಜಿ ಪರಿಶೀಲನೆಯಲ್ಲಿದೆ ಎಂದರು.

ಜಿಪಂ ಸಿಇಒ ಸ್ವರೂಪ ಟಿ.ಕೆ ಮಾತನಾಡಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯ ವಿರಕ್ತಮಠ, ಅರವಿಂದ ಏಗನಗೌಡರ, ರತ್ನಾ ತೇಗೂರಮಠ, ಜಿಲ್ಲಾ ಮಟ್ಟದ ಅಧಿಕಾರಿ, ಇತರರು ಇದ್ದರು.