ಆಲ್ದೂರು: ಆಲ್ದೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಡಾ. ಬಿ.ಆರ್.ಆಂಬೇಡ್ಕರ್ ಹೋರಾಟ ವೇದಿಕೆ ಮತ್ತು ದಲಿತ ಸಂಘಟನೆಗಳಿಂದ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮುಂದೆ ಧರಣಿ ನಡೆಸಲಾಯಿತು.
ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೌಕರರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಕಡೆಗಣಿಸಿ ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ನೌಕರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸಹಕಾರ ನಿಯಮಗಳನ್ನು ಅನುಸರಿಸದೆ ಅವರಿಗೆ ಬೇಕಾದವರನ್ನು ನೇಮಕ ಮಾಡಿಕೊಂಡು ದಲಿತರನ್ನು ಸಂಪೂರ್ಣ ಕಡೆಗಣನೆ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂತನ ಕಟ್ಟಡ ಉದ್ಘಾಟನೆ ಸಂದರ್ಭದಲ್ಲೂ ಮೂರು ಮಾಜಿ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೆ ಅವಮಾನ ಮಾಡಿದ್ದನ್ನು ಖಂಡಿಸಿ ಉದ್ಘಾಟನೆ ದಿನವೇ ಪ್ರತಿಭಟಿಸಲಾಗಿತ್ತು ಎಂದರು.
ಈ ಹಿಂದೆ ಮಾಡಿರುವ ಸಭಾ ನಡಾವಳಿ ರದ್ದುಪಡಿಸಿ ಸೇವಾ ಹಿರಿತನದ ಆಧಾರದ ಮೇಲೆ ಪ್ರಭಾರ ಸಿಇಒ ಅನ್ನು ನೇಮಿಸಬೇಕು. ಖಾಲಿ ಇರುವ ಹುದ್ದೆಗಳಿಗೆ ನಿಯಮಾನುಸಾರ ರೋಸ್ಟರ್ ಅಳವಡಿಸಿ ಅವಕಾಶ ವಂಚಿತ ದಲಿತ ಮಹಿಳೆ ಹಾಗೂ ಹಿಂದುಳಿದ ಸಮುದಾಯಗಳಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಕೋಟೆವೂರು ಲಕ್ಷ್ಮಣ್ ಮಾತನಾಡಿ, ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲಸ ಮಾಡುವವರು ವಿಆರ್‌ಎಸ್ ತೆಗೆದುಕೊಂಡಿದ್ದರಿಂದ ಆ ಸ್ಥಾನ ಖಾಲಿಯಿದೆ. ಕಳೆದ ವಾರ ಸಂಘದ ಕಾರ್ಯನಿರ್ವಹಣಾಧಿಕಾರಿಗಳು ನಿವೃತ್ತಿಯಾಗಿದ್ದಾರೆ. ಸೇವಾ ಹಿರಿತನ ಕಡೆಗಣಿಸಿ ಒಬ್ಬ ದಲಿತ ಸಮುದಾಯ ಹಾಗೂ ಮತ್ತೊಬ್ಬರು ಮಹಿಳೆ ಎಂಬ ಕಾರಣಕ್ಕಾಗಿ ಇಬ್ಬರನ್ನೂ ಕಡೆಗಣಿಸಿ ಕಿರಿಯ ನೌಕರನನ್ನು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಿಕೊಂಡು ಸಭಾ ನಡಾವಳಿ ಮಾಡಿಕೊಂಡು ಸಹಕಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಹಕಾರ ಸಂಘದ ಅಧ್ಯಕ್ಷ ಪರಮೇಶ್ ಮಾತನಾಡಿ, ಸಂಘದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಈ ಹಿಂದಿನ ಸಿಇಒ ಅವರು ಸಿಬ್ಬಂದಿ ನೇಮಕಾತಿ ಬಗ್ಗೆ ಸಭೆಗೆ ತಪ್ಪು ಮಾಹಿತಿ ನೀಡಿದ್ದು ಅವರಿಗೆ ಲಿಖಿತವಾಗಿ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಅಂಬೇಡ್ಕರ್ ಹೋರಾಟ ವೇದಿಕೆ ಗೌರವಾಧ್ಯಕ್ಷ ಹೊನ್ನಪ್ಪ, ಕಾರ್ಯದರ್ಶಿ ಹೆಡದಾಳ್ ಕುಮಾರ್, ಕೋಟೆವೂರು ಲಕ್ಷ್ಮಣ್, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್, ಉಮೇಶ್ ದೇವರಹಳ್ಳಿ, ಯೋಗೇಶ್, ಗ್ರಾಪಂ ಸದಸ್ಯರಾದ ಪೂರ್ಣೇಶ್, ಲಕ್ಷ್ಮೀ ಇತರರಿದ್ದರು.