- ಚಾಮರಾಜನಗರ: ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸುವುದರ ಜತೆಗೆ ಪ್ರತಿಯೊಬ್ಬರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ಆಯೋಗವು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.
- ಲೋಪದೋಷಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸತ್ತೇಗಾಲ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಾಲ್‌ರೋಡ್, ಅರ್ಧನಾರಿಪುರ, ಪಾಲರ್ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಿರುವ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಸಭೆ, ಸಮಾರಂಭಗಳ ಬಗ್ಗೆ ಮಾಹಿತಿ ಪಡೆದು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ಮುಖಂಡರ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕುವಂತಿಲ್ಲ.
- ಇನ್ನು 50 ಸಾವಿರ ರೂ. ಮೇಲ್ಪಟ್ಟು ಹಣ ಸಾಗಿಸುವುದು ಕಂಡು ಬಂದಲ್ಲಿ ಅಗತ್ಯ ದಾಖಲೆ ಪಡೆದು ಪರಿಶೀಲಿಸಬೇಕು. ಒಂದು ವೇಳೆ ಯಾವುದೇ ದಾಖಲೆ ನೀಡದಿದ್ದಲ್ಲಿ ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಫ್ಲೈಯಿಂಗ್ ಸ್ಕ್ವಾಡ್ ಸದಾ ಸಕ್ರಿಯವಾಗಿರಬೇಕು. ಸಮಸ್ಯೆಗಳಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಈ ಮೂಲಕ ತಮ್ಮ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
- ಸಹಾಯಕ ಚುನಾವಣಾಧಿಕಾರಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ತಾಪಂ ಎ.ಡಿ. ರವೀಂದ್ರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಎಇಇಗಳಾದ ರಮೇಶ್, ರಾಮಕೃಷ್ಣ, ಪ್ರಾಂಶುಪಾಲ ಶಾಂತರಾಜು, ಇನ್‌ಸ್ಪೆಕ್ಟರ್ ಶಶಿಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.