ಯಳಂದೂರು: ಸರ್ಕಾರಿ ಶಾಲೆಗಳು ಈಗ ಉನ್ನತೀಕರಣಗೊಂಡಿವೆ. ಇಲ್ಲಿರುವ ಶಿಕ್ಷಕರು ನುರಿತ ಶಿಕ್ಷಕರಾಗಿದ್ದು, ಎಲ್ಲ ರೀತಿಯ ತರಬೇತಿ ಪಡೆದಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಸರ್ಕಾರಿ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಹಾಗೂ ಪಾಲಕರ ಕ್ರೀಡಾಕೂಟದಲ್ಲಿ ಮಾತನಾಡಿ, ಪಬ್ಲಿಕ್ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಇವರನ್ನು ಚುರುಕುಗೊಳಿಸುವ ಕೆಲಸವನ್ನು ಮಾಡಲಾಗುತ್ತದೆ. ಅಲ್ಲದೆ ಮಕ್ಕಳ ಪಾಲಕರ ಸಭೆಯನ್ನು ಕರೆದು ಮಕ್ಕಳ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಈಗ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಇಲ್ಲಿನ ಚಟುವಟಿಕೆಗೆ ಅನೇಕ ರೀತಿಯ ನೆರವು ನೀಡುತ್ತಿದೆ ಎಂದರು.
ಇಲ್ಲಿ ಉತ್ತಮ ಶಿಕ್ಷಣ ಉಚಿತವಾಗಿ ದೊರೆಯುತ್ತದೆ. ನಮ್ಮ ಶಾಲೆಯಲ್ಲಿ ವಸ್ತುಪ್ರದರ್ಶನ ಆಯೋಜಿಸಿ ಇದರಲ್ಲಿ ಮಕ್ಕಳಿಂದ ತಯಾರಿಸಿದ ಮಾದರಿಗಳ ಪ್ರದರ್ಶನವನ್ನು ಇಡಲಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಪಾಲಕರಿಗೂ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಆ ಮೂಲಕ ಪಾಲಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿ ಸಂಭ್ರಮಿಸುವ ವಾತಾವರಣ ನಿರ್ಮಿಸಲಾಗಿದೆ ಎಂದರು.
ಶಿಕ್ಷಕರಾದ ಶಿವಲಂಕಾರ್, ಗ್ರಾಪಂ ಸದಸ್ಯ ಮಲ್ಲು, ಪ್ರಕಾಶ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಮತ್ತು ಪಾಲಕರು ಹಾಜರಿದ್ದರು.