ಇಳಕಲ್ಲ (ಗ್ರಾ) : ಪಾಲಕರು ತಮ್ಮ ಮಕ್ಕಳನ್ನು ಮುಕ್ತ ಮನಸ್ಸಿನಿಂದ ಸರ್ಕಾರಿ ಶಾಲೆಗಳಿಗೆ ಕಳಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೆಂಟ್ರಲ್ ಸ್ಕೂಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳು ಸನ್ನದ್ಧವಾಗಿವೆ. ನಿಮಗೆ ಯಾವುದೇ ಕೊರತೆ ಕಂಡು ಬಂದರೆ ಕೂಡಲೇ ಅಧಿಕಾರಿಗಳ ಬಳಿ ಅದನ್ನು ನಿವೇದಿಸಿ ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಕಲಿಸಬೇಕು ಎಂಬ ಸಲಹೆ ನೀಡಿದ್ದಿರಿ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಕಾರ್ಯರೂಪಕ್ಕೆ ತರುವ ವ್ಯವಸ್ಥೆ ಮಾಡಲಾಗುವುದು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟೆ ಉಪನಿರ್ದೇಶಕ ಎಚ್.ಜಿ. ಮಿರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ನಗರಸಭೆ ಸದಸ್ಯ ಸುರೇಶ ಜಂಗ್ಲಿ, ಮುಖ್ಯಶಿಕ್ಷಕ ಶ್ರೀಧರ ಜೋಗಿನ ಇದ್ದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರ್ಯಕ್ರಮಕ್ಕೂ ಮೊದಲು ಶಾಲೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಕ್ಕಳ ಕೈಯಿಂದ ಸಸಿ ನೆಡಿಸಿ ನೀರೆರೆದರು.