ಜಿಲ್ಲೆ

ದ್ವೇಷಕಾರಣದ ವ್ಯಾಜ್ಯಗಳಿಂದ ನೆಮ್ಮದಿ ಭಂಗ: ಹರಿಹರದಲ್ಲಿ ನ್ಯಾಯಾಧೀಶ ಮಂಜಪ್ಪ ಅಣ್ಣಯ್ಯನವರ್ ಹೇಳಿಕೆ

ಹರ್ಷ ನ.ಪುರೋಹಿತ

ಹರಿಹರ : ದುಡುಕು, ದುರಾಸೆ ಮತ್ತು ದ್ವೇಷದ ಕಾರಣದಿಂದ ದಾಖಲಾಗಿರುವ ದಾವೆಗಳನ್ನು ಮುಕ್ತಾಯಗೊಳಿಸಲು ಪಕ್ಷಗಾರರು ಕೂಡಲೇ ಮುಂದಾಗಬೇಕು ಎಂದು 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಹೇಳಿದರು.

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ಎಷ್ಟೋ ಸಲ ನಾವು ಹೂಡಿರುವ ವ್ಯಾಜ್ಯ ದುಡುಕಿನಿಂದ ತೆಗೆದುಕೊಂಡ ನಿರ್ಧಾರವಾಗಿರುತ್ತದೆ. ದುರಾಸೆ, ದಾಯಾದಿ ಮತ್ಸರ ಅಥವಾ ದ್ವೇಷದಿಂದ ವ್ಯಾಜ್ಯಗಳನ್ನು ಮುಂದುವರಿಸುವುದರಿಂದ ನೆಮ್ಮದಿ ಭಂಗವೇ ಹೊರತು ಮತ್ತೇನೂ ಪ್ರಯೋಜನವಿಲ್ಲ ಎಂದರು.

ಜನರು ಸಕಾರಾತ್ಮಕವಾಗಿ ಆಲೋಚಿಸಬೇಕು. ಸಣ್ಣಪುಟ್ಟ ಸಮಸ್ಯೆಗಳಿಗೂ ಕೋರ್ಟ್ ಮೆಟ್ಟಿಲು ಹತ್ತಬಾರದು. ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಉಭಯ ಪಕ್ಷಗಾರರು ಉದಾರತೆಯಿಂದ ರಾಜಿ ಮಾಡಿಕೊಂಡು ಅನ್ಯೋನ್ಯವಾಗಿ ಇರಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯಾದ ನ್ಯಾಯಾಧೀಶ ಮಹಾವೀರ ಮಾತನಾಡಿ, ದೇಶದಲ್ಲಿ ನಿತ್ಯವೂ ಲಕ್ಷಾಂತರ ಪ್ರಕರಣಗಳ ವಿಚಾರಣೆ ನಡೆದು, ಸಾವಿರಾರು ಪ್ರಕರಣಗಳು ಇತ್ಯರ್ಥವಾಗುತ್ತಿವೆ. ಆದರೆ, ಕಕ್ಷಿಗಾರರಲ್ಲಿ ಆತ್ಮತೃಪ್ತಿ, ನೆಮ್ಮದಿ ಕಾಣುತ್ತಿಲ್ಲ. ಆದ್ದರಿಂದ ರಾಜಿ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳುವುದೇ ಜಾಣತನ ಎಂದರು.

ಜೂ. 13ರಂದು ಹಮ್ಮಿಕೊಂಡಿರುವ ಬೃಹತ್ ಲೋಕ್ ಅದಾಲತ್‌ವರೆಗೆ ಪ್ರತಿದಿನ ಪ್ರತಿ ನ್ಯಾಯಾಲಯದಲ್ಲೂ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಖರ್ಚಿಲ್ಲದೆ, ಶೀಘ್ರವಾಗಿ ನ್ಯಾಯ ನಿರ್ಣಯ ಮಾಡುವ ಮಹತ್ವದ ಲೋಕ್ ಅದಾಲತ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನ್ಯಾಯಾಧೀಶರಾದ ಪದ್ಮಶ್ರೀ ಮುನವಳ್ಳಿ, ಫಕ್ಕೀರಮ್ಮ ಕೆಳಗೇರಿ, ಜ್ಯೋತಿ ಅಶೋಕ್ ಪತ್ತಾರ್, ವೀಣಾ ಕೋಳೇಕರ, ವಕೀಲರ ಸಂಘದ ಅಧ್ಯಕ್ಷ ಬಿ.ಆನಂದಕುಮಾರ್, ಉಪಾಧ್ಯಕ್ಷೆ ಕೆ.ಎಸ್.ಶುಭಾ, ಎಪಿಪಿಗಳಾದ ಪುರುಷೋತ್ತಮ, ಹೇಮಲತಾ, ಎಜಿಪಿ ನವೀನ್ ಕುಮಾರ್, ಹಿರಿಯ ವಕೀಲರು, ಕಕ್ಷಿದಾರರಿದ್ದರು.