ಶಿಸ್ತುಬದ್ಧ ಅಧ್ಯಯನದೊಂದಿಗೆ ವಿದ್ಯಾರ್ಥಿ ಜೀವನದ ಸಂಭ್ರಮ ಮತ್ತು ಸಂತೋಷಗಳನ್ನೂ ಅನುಭವಿಸಿ ಎಂದು ಮೈಸೂರು ವಿವಿ ತಾಂತ್ರಿಕ ಶಾಲೆ ನಿರ್ದೇಶಕ ಡಾ.ಟಿ.ಅನಂತ ಪದ್ಮನಾಭ ಹೇಳಿದರು.
ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ‘ಅಮ್ಯೂಸ್- 2023’ ಸಾಂಸ್ಕೃತಿಕ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಗೀತ, ಸಿನಿಮಾ, ಫ್ಯಾಶನ್ ಶೋ, ನೃತ್ಯ ಇತ್ಯಾದಿ ಚಟುವಟಿಕೆಗಳು ನಮ್ಮ ಮನಕ್ಕೆ ಚೈತನ್ಯ ಮತ್ತು ಸ್ಫೂರ್ತಿ ಕೊಡುತ್ತವೆ. ಹಾಗಾಗಿ ಉತ್ಸವದಲ್ಲಿ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಸಂಪೂರ್ಣ ಪಾಲ್ಗೊಂಡು ಇದನ್ನು ಮಾದರಿ ಮೇಳವನ್ನಾಗಿಸಿ ವಿವಿಯ ಕೀರ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಈ ವರ್ಷದ ಲಾಂಛನ(ಲೋಗೋ) ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾದ ‘ಯಕ್ಷಗಾನ’ ಹಾಗೂ ‘ಕಥಕ್ಕಳಿ’ ನೃತ್ಯದ ಮಿಶ್ರಣವಾಗಿರುವುದು ವಿವಿಯ ಹೆಮ್ಮೆ. ನಮ್ಮ ವಿದ್ಯಾರ್ಥಿಗಳೇ ಇದನ್ನು ರಚಿಸಿರುವುದು ಮತ್ತೊಂದು ವಿಶೇಷ ಎಂದರು.
ಮೈಸೂರು ವಿವಿ ಕುಲಸಚಿವೆ ಶೈಲಜಾ ಮಾತನಾಡಿ, ವಿದ್ಯಾರ್ಜನೆ ಪ್ರಮುಖ ಧ್ಯೇಯ. ಅದರೊಂದಿಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭಾ ವಿಕಸನಕ್ಕೆ ಅಮ್ಯೂಸ್ - 2023 ಉತ್ಸವ ಮಹತ್ವದ ವೇದಿಕೆಯಾಗಲಿ ಎಂದು ಆಶಿಸಿದರು. ಉತ್ಸವದ ಸಹ ಸಂಯೋಜಕರಾದ ಡಾ. ಸುನೀಲ್, ಡಾ. ಟಿ.ಎಂ. ಪ್ರದೀಪ್ ಇದ್ದರು.