ಜಿಲ್ಲೆ

ಸಾಂಸ್ಕೃತಿಕ ಚಟುವಟಿಕೆಗಳಿಂದ ಮೌಲ್ಯಗಳ ವರ್ಧನೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಕೇವಲ ಪಠ್ಯದ ಚೌಕಟ್ಟಿನಲ್ಲಿ ವ್ಯಾಸಂಗ ಮಾಡಿದರೆ ಸಾಲದು. ಅವರು ತಮ್ಮ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸಾಂಸ್ಕೃತಿಕ ಚಟುವಟಿಕೆಗಳಿಂದ ಮೌಲ್ಯಗಳ ವರ್ಧನೆ ಸಾಧ್ಯ ಎಂದು ಹಿರಿಯ ವಕೀಲ ಅರುಣ ಚರಂತಿಮಠ ಹೇಳಿದರು.

ನಗರದ ಲೀಲಾವತಿ ಆರ್​. ಚರಂತಿಮಠ ಪಬ್ಲಿಕ್​ ಶಾಲೆಯಲ್ಲಿ ಹು-ಧಾ ಅವಳಿ ನಗರಗಳ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಲ್ಲಿ ಕಲೆ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬ ಮನುಷ್ಯನೂ ಕಲೆ ಒದಗಿಸುವ ಉಲ್ಲಾಸ ಮತ್ತು ಮನೋರಂಜನೆ ಆನಂದಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಕಲಾಭಿರುಚಿ ಬೆಳೆಸಬೇಕು ಎಂದರು.

ಸಮೂಹ ನತ್ಯ, ಸಮೂಹ ಗಾಯನ, ಭಾಷಣ, ಮಣ್ಣಿನಿಂದ ಮೂರ್ತಿ ಮಾಡುವುದು, ಚಿತ್ರಕಲೆ, ರಂಗೋಲಿ, ಮತ್ತಿತರ ಚಟುವಟಿಕೆಗಳನ್ನು ಒಳಗೊಂಡ ಸ್ಪರ್ಧೆಗಳಲ್ಲಿ ಹುಬ್ಬಳ್ಳಿ-ಧಾರವಾಡದ ಆಯ್ದ 190 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದರು.

ಹುಬ್ಬಳ್ಳಿಯ ವಿಮಲಾ ಕುಲಕರ್ಣಿ ಮೆಮೊರಿಯಲ್​ ಶಾಲೆ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳ ಸಮಗ್ರ ವೀರಾಗ್ರಣಿ ಪಡೆಯಿತು. ಕೆಎಲ್​ಇ ಸಂಸ್ಥೆಯ ಎಂ.ಆರ್​. ಸಾಖರೆ ಶಾಲೆ ರನ್ನರ್​ ಅಪ್​ ಪ್ರಶಸ್ತಿ ಪಡೆಯಿತು.

ಶಾಲೆಯ ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ, ಶಾಲೆ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಇತರರು ಇದ್ದರು.