ಅನ್ಸಾರ್ ಇನೋಳಿ ಉಳ್ಳಾಲ
ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಜತೆ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಹಂತಗಳಲ್ಲಿ ಆಂಗ್ಲ ಶಿಕ್ಷಣಕ್ಕೆ ಅನುಮತಿ ನೀಡುತ್ತಿದೆ. ಈ ಸಾಲಿನಲ್ಲಿ 17 ಶಾಲೆಗಳಿಗೆ ಅನುಮತಿ ನೀಡಿದರೂ ಎರಡು ಶಾಲೆಗಳಲ್ಲಿ ಮಾತ್ರ ಆಂಗ್ಲ ಶಿಕ್ಷಣ ಆರಂಭಿಸಲಾಗಿದೆ. ಈ ನಡುವೆ ಹಲವು ಶಾಲೆಗಳಿಂದ ಇಲಾಖೆಗೆ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ ಎನ್ನುವುದು ವಿಶೇಷ.
ಉಳ್ಳಾಲ ತಾಲೂಕಿಗೆ ಒಳಪಡುವ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಡಿ 85 ಪ್ರಾಥಮಿಕ ಶಾಲೆಗಳಿದ್ದು 24 ಶಾಲೆಗಳು ಹಿಂದೆಯೇ ಆಂಗ್ಲ ಮಾಧ್ಯಮವಾಗಿ ಮಾರ್ಪಟ್ಟಿವೆ. 2025-26ನೇ ಸಾಲಿನಲ್ಲಿ 17 ಶಾಲೆಗಳಿಗೆ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಅನುಮತಿ ನೀಡಲಾಗಿದ್ದರೂ ಪಾವೂರು ಗ್ರಾಮದ ಗಾಡಿಗದ್ದೆ ಹಾಗೂ ಮಂಜನಾಡಿ ಗ್ರಾಮದ ಅಸೈ ಮದಕ ಶಾಲೆ ಮಾತ್ರವೇ ಆಂಗ್ಲ ಶಿಕ್ಷಣ ಆರಂಭಿಸಿವೆ.
1932ರಲ್ಲಿ ಆರಂಭಗೊಂಡಿರುವ ಗಾಡಿಗದ್ದೆ ಶಾಲೆಗೆ 93 ವರ್ಷಗಳ ಇತಿಹಾಸ ಇದ್ದು ಶಾಲೆ ಉಳಿಸುವ ನಿಟ್ಟಿನಲ್ಲಿ ಆಂಗ್ಲಮಾಧ್ಯಮಕ್ಕೆ ಆದ್ಯತೆ ನೀಡಲಾಗಿದ್ದು ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 17 ಮಕ್ಕಳು ಕಲಿಯುತ್ತಿದ್ದಾರೆ. ಒಂದನೇ ತರಗತಿಗೂ ಆಂಗ್ಲ ಶಿಕ್ಷಣಕ್ಕೆ ಅನುಮತಿ ನೀಡಲಾಗಿದೆ. ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಅವರು ಸಮವಸ್ತ್ರ ನೀಡಿದ್ದರೆ ಇತರ ದಾನಿಗಳು ವೇತನಸಹಿತ ಅಗತ್ಯ ವ್ಯವಸ್ಥೆಗೆ ಕೈಜೋಡಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ಹೊಡೆತ!: ಕಳೆದ ಕೆಲವು ವರ್ಷಗಳಿಂದ ಆಂಗ್ಲಮಾಧ್ಯಮ ಶಾಲೆಗಳ ಅಬ್ಬರಕ್ಕೆ ನಲುಗಿ ಅದೆಷ್ಟೋ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕಣ್ಣು ಮುಚ್ಚಿವೆ. ಹಲವು ಅನುದಾನಿತ ಶಾಲೆಗಳನ್ನು ಮುನ್ನಡೆಸುವ ಉಸಾಬರಿಯೇ ಬೇಡ ಎನ್ನುವ ನಿರ್ಧಾರಕ್ಕೆ ಶಾಲಾಡಳಿತ ಮಂಡಳಿ ಬಂದಿದ್ದರಿಂದ ಸಂಬಂಧಪಟ್ಟ ಶಾಲಾ ಶಿಕ್ಷಕರೇ ಮಕ್ಕಳನ್ನು ಹುಡುಕಿಕೊಂಡು ಹೋಗುವ ದುಸ್ಥಿತಿ ಬಂದಿದೆ. ಸರ್ಕಾರಿ ಶಾಲೆಗೆ ತಾಗಿಕೊಂಡೇ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ ಸರ್ಕಾರದ ನಡೆಯೂ ಕನ್ನಡ ಶಾಲೆಗಳ ಅವನತಿಗೆ ಕಾರಣ ಎಂದರೂ ತಪ್ಪಿಲ್ಲ.
ಈಗ ಸರ್ಕಾರವೇ ತನ್ನ ತಪ್ಪಿಗೆ ಪ್ರಾಯಶ್ಚಿತ ಎನ್ನುವಂತೆ ಸರ್ಕಾರಿ ಶಾಲೆಗಳನ್ನೇ ಆಂಗ್ಲಮಾಧ್ಯಮದ ರೂಪ ನೀಡುತ್ತಿದ್ದು ಗ್ರಾಮೀಣ ಭಾಗದ ಬಡಮಕ್ಕಳೂ ಆಂಗ್ಲಭಾಷೆ ಮಾತಾಡುವಂತಾಗಿದೆ. ಅಲ್ಲದೆ ಒಂದೊಂದು ಗ್ರಾಮದಲ್ಲೂ ಮೂರ್ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು ಬಹುತೇಕ ಆಂಗ್ಲಮಾಧ್ಯಮ ಆಗಿದ್ದು ಅಳಿದುಳಿದ ಶಾಲೆಗಳೂ ಮುಂದಕ್ಕೆ ಆಂಗ್ಲಮಾಧ್ಯಮ ಆಗಲಿವೆ. ಇದರಿಂದಾಗಿ ದೂರದ ಖಾಸಗಿ ಶಾಲೆಗಳಿಗೆ ಹೋಗಬೇಕಾದ ಮಕ್ಕಳು ತಮ್ಮೂರಿನ ಸರ್ಕಾರಿ ಶಾಲೆಗೇ ಸೇರ್ಪಡೆ ಆಗುವುದರಿಂದ ಖಾಸಗಿ ಶಾಲೆಗಳ ಭವಿಷ್ಯದ ಪ್ರಶ್ನೆ ಎದ್ದಿದೆ.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 23 ಶಾಲೆಗಳಿವೆ. ಈ ಪೈಕಿ ಏಳು ಶಾಲೆಗಳಿಗೆ ಆಂಗ್ಲಮಾಧ್ಯಮಕ್ಕೆ ಅನುಮತಿ ದೊರಕಿದ್ದು ಆಂಗ್ಲ ಶಿಕ್ಷಣ ನೀಡಲಾಗುತ್ತಿದೆ. ಆ ಪೈಕಿ ಹೂಹಾಕುವಕಲ್ಲು ಶಾಲೆ ಪಿಎಂಶ್ರೀ ಪಟ್ಟಿಯಲ್ಲಿದೆ. ಕಲ್ಮಿಂಜ ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಿಂದ ಎಲ್‌ಕೆಜಿ ಆರಂಭಿಸಲಾಗಿದ್ದರೂ ಇಲಾಖೆಗೆ ಪ್ರಸ್ತಾವನೆ ಸಲ್ಲಿಸದೆಯೇ ಎಸ್‌ಡಿಎಂಸಿಯಿಂದ ನಡೆಸಲಾಗುತ್ತಿದೆ. ಉಳಿದಂತೆ 16 ಶಾಲೆಗಳಿಂದ ಆಂಗ್ಲಮಾಧ್ಯಮಕ್ಕೆ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ ಎನ್ನುವುದು ವಿಶೇಷ!
ಆಂಗ್ಲಮಾಧ್ಯಮ ಶಿಕ್ಷಣ ಆರಂಭಿಸಬೇಕಾದರೆ ಶಾಲೆಗೆ ಮೂಲಸೌಕರ್ಯ, ಶಿಕ್ಷಕರಿಗೆ ತರಬೇತಿ ಅಗತ್ಯ. ಪ್ರತಿವರ್ಷ ಸರ್ಕಾರ ಇಂತಿಷ್ಟು ಶಾಲೆಗಳಿಗೆ ಆಂಗ್ಲಮಾಧ್ಯಮದ ಅನುಮತಿ ನೀಡುತ್ತಿದ್ದು ಕೆಪಿಎಸ್ ಶಾಲೆಗಳಿಗೆ ಎಲ್‌ಕೆಜಿ ಯುಕೆಜಿಗೆ ಅನುಮತಿ ಇದೆ. ಪಿಎಂಶ್ರೀ ಶಾಲಾ ಅತಿಥಿ ಶಿಕ್ಷಕರಿಗೆ ಕೇಂದ್ರದಿಂದ ವೇತನ ನೀಡಲಾಗುತ್ತದೆ. ಎಂ.ಪಿ.ಜ್ಞಾನೇಶ್ ಪ್ರಭಾರ ಶಿಕ್ಷಣಾಧಿಕಾರಿ, ಮಂಗಳೂರು ದಕ್ಷಿಣ ವಲಯ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ತೀರಾ ಬಡ ವರ್ಗದವರಾಗಿದ್ದಾರೂ ಸಾಧನೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಪ್ರಸ್ತುತ ದಿನಗಳಲ್ಲಿ ಆಂಗ್ಲಭಾಷೆಯ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯವಾಗಿದ್ದು ಅದಕ್ಕೆ ಅನುಗುಣವಾಗಿ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ವ್ಯವಸ್ಥೆಯ ಬದಲಾವಣೆ ತಪ್ಪಲ್ಲ. ರಮೇಶ್ ಶೇಣವ ಶಿಕ್ಷಣ ಪ್ರೋತ್ಸಾಹಕ ಗಾಡಿಗದ್ದೆ ಎನ್ನುವುದು ಅತ್ಯಂತ ಗ್ರಾಮೀಣ ಪ್ರದೇಶ ಆಗಿದ್ದು ಬಸ್‌ಗಳ ಸಹಿತ ಇತರ ವ್ಯವಸ್ಥೆ ಇಲ್ಲದ ಕಾರಣ ಸ್ಥಳೀಯ ಮಕ್ಕಳು ಬೇರೆಕಡೆ ಶಾಲೆಗೆ ಹೋಗುವುದು ಕಷ್ಟ. ಈ ನಿಟ್ಟಿನಲ್ಲಿ 93 ವರ್ಷಗಳ ಇತಿಹಾಸ ಇರುವ ಗಾಡಿಗದ್ದೆ ಶಾಲೆ ಉಳಿಸುವ ನಿಟ್ಟಿನಲ್ಲಿ ದಾನಿಗಳ ಸಹಕಾರದಲ್ಲಿ ಆಂಗ್ಲಮಾಧ್ಯಮ ಆರಂಭಿಸಲಾಗಿದೆ. ರಿಜಾಝ್ ಗಾಡಿಗದ್ದೆ ಗಾಡಿಗದ್ದೆ ಶಾಲೆ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ