ಕಣ್ಣೂರು ಸರ್ಕಾರಿ ಶಾಲೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಇಂಗ್ಲಿಷ್ ಮಾಧ್ಯಮ ಆರಂಭೋತ್ಸವಕ್ಕೆ ಚಾಲನೆ ನೀಡಿದರು. ಗುರುಲಿಂಗಯ್ಯ, ಚಿನ್ನಪ್ಪಯ್ಯ, ಮಲ್ಲೇಶ್, ರಾಜಮ್ಮ ಇತರರು ಇದ್ದರು.  
ಜಿಲ್ಲೆ

ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ಅತ್ಯವಶ್ಯಕ

ಅಭಿನಯ್ ಎಚ್.ಎಂ

ಹನೂರು: ತಾಲೂಕಿನ ಕಣ್ಣೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಸಕ ಎಂ.ಆರ್ ಮಂಜುನಾಥ್ ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮ ಕೊಠಡಿ ಉದ್ಘಾಟಿಸುವುದರ ಜತೆಗೆ ಪಾಲಕರ ಸಮ್ಮುಖದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಶಾಲೆಗೆ ಆಗಮಿಸಿದ ಶಾಸಕರಿಗೆ ಬಿಇಒ ಗುರುಲಿಂಗಯ್ಯ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಹೂಗುಚ್ಛ ನೀಡಿ ತಮಟೆ ಸದ್ದಿನೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಕೊಠಡಿ ಉದ್ಘಾಟನೆ ಬಳಿಕ ಮಾತನಾಡಿದ ಶಾಸಕರು, ರಾಜ್ಯದಲ್ಲಿ ಮಾತೃ ಭಾಷೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಾಗೆಯೇ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆಯೂ ಅವಶ್ಯಕವಾಗಿದೆ. ಈ ದಿಸೆಯಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಿದೆ. ಈ ಬಗ್ಗೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಆಂಗ್ಲ ಮಾಧ್ಯಮದ ಶಿಕ್ಷಣದಿಂದ ಮಕ್ಕಳ ಜ್ಞಾನಾರ್ಜನೆ ಹಾಗೂ ಕಲಿಕೆ ಹೆಚ್ಚಾಗಲಿದೆ. ಆದ್ದರಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಸರ್ವಾಂಗೀಣ ಬೆಳವಣಿಗೆಯತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಚೆನ್ನಾಗಿ ಓದುವಂತೆ ಶಾಸಕರು ಪುಟಾಣಿಗಳಿಗೆ ಸಲಹೆ ನೀಡಿದರು. ಶಾಲೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಆಟದ ಮೈದಾನ ಅಗತ್ಯತೆ ಕೋರಿದ ಶಿಕ್ಷಕರಿಗೆ ಅಗತ್ಯ ಭರವಸೆ ನೀಡಲಾಯಿತು.

ಬಿಇಒ ಗುರುಲಿಂಗಯ್ಯ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಚಿನ್ನಪ್ಪಯ್ಯ, ಮಹೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು, ಸಿಆರ್‌ಪಿ ಅನ್ವರ್‌ಖಾನ್, ಎಸ್‌ಡಿಎಂಸಿ ಅಧ್ಯಕ್ಷೆ ಮಲ್ಲೇಶ್, ಗ್ರಾಪಂ ಅಧ್ಯಕ್ಷೆ ರಾಜಮ್ಮ, ಮುಖ್ಯ ಶಿಕ್ಷಕಿ ಶಿವಮ್ಮ, ಪಿಡಿಒ ಸಿದ್ದರಾಜು, ಶಿಕ್ಷಕರಾದ ಶಿವಕುಮಾರ್, ಸಾವುಕರಾಜು, ಸುರೇಶ್‌ಕುಮಾರ್ ಶ್ರುತಿ, ಲತಾ ಹಾಗೂ ಇತರರು ಇದ್ದರು.