ಜಿಲ್ಲೆ

ಕನ್ನಡತನಕ್ಕೆ ಧಕ್ಕೆಯಾದರೆ ಕ್ರಾಂತಿಗೆ ಸಿದ್ಧ

ಸೊರಬ: ಕನ್ನಡಿಗರು ವೀರತನ, ಶೌರ್ಯ, ದೇಶಭಕ್ತಿ ಹಾಗೂ ತ್ಯಾಗ-ಬಲಿದಾನಗಳಿಗೆ ಹೆಸರುವಾಸಿಯಾದವರು ಎಂಬುದಕ್ಕೆ ಹಲವು ಶಾಸನಗಳು ಸಾಕ್ಷ್ಯ ನುಡಿಯುತ್ತವೆ. ಕನ್ನಡಿಗರು ನಾಡು-ನುಡಿಯ ರಕ್ಷಣೆಯ ವಿಷಯದಲ್ಲಿ ಸದಾ ಮುಂದು. ಭಾಷಾ ಶತ್ರುಗಳಿಂದ ಕನ್ನಡತನಕ್ಕೆ ಧಕ್ಕೆಯಾದರೆ ಕ್ರಾಂತಿ ಮಾಡಲು ಸಿದ್ಧರಿದ್ದಾರೆ ಎಂದು ಸರ್ವಾಧ್ಯಕ್ಷೆ ಡಿ.ಎಸ್.ತನುಜಾ ಸೂರಣಗಿ ಹೇಳಿದರು.

ಸೋಮವಾರ ತಾಲೂಕಿನ ಆನವಟ್ಟಿಯ ಕೋಟಿಪುರದ ಎವರಾನ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಮಹಿಳಾ ಘಟಕ ಹಮ್ಮಿಕೊಂಡ 5ನೇ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್​ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದು ಆಶಿಸಿದರು.

ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಕನ್ನಡ ಶ್ರೀಮಂತವಾದರೂ ಆಂಗ್ಲ ಭಾಷೆಯ ಆತಂಕ ಜನತೆಯನ್ನು ಕಾಡುತ್ತಿದೆ. ಇದರಿಂದ ಹೊರಬಂದು ಕನ್ನಡ ನಾಡು-ನುಡಿ ಕಟ್ಟುವ ಸತ್ಕಾರ್ಯವಾಗಬೇಕು. ಕನ್ನಡ ನಾಡನ್ನು ಮೌರ್ಯರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಹಾಗೂ ಸುಲ್ತಾನರು ಸೇರಿ ವಿವಿಧ ರಾಜ, ಮಹಾರಾಜರು ಆಳ್ವಿಕೆ ಮಾಡಿದ್ದು ನಾಡಿಗೆ ಸಾಂಸ್ಕೃತಿಕ, ಧಾರ್ವಿುಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಸರ್ಕಾರಗಳು ಈವರೆಗೆ ಪ್ರತ್ಯೇಕ ಇಲಾಖೆ ತೆರೆಯದೆ ನಿರ್ಲಕ್ಷ್ಯ ವಹಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಪ್ರೋತ್ಸಾಹಿಸಲು ವೇದಿಕೆಯಿಂದ ಕಳೆದ 14 ವರ್ಷಗಳಿಂದ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಪ್ರಸ್ತುತ ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಮತ್ತು ಸೃಜನಶೀಲತೆ ಕಲೆಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಭಾಷಾಭಿಮಾನಿ ಮುಖ್ಯ ಎಂದು ಹೇಳಿದರು.

8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಡಾ. ಎಂ.ಕೆ.ಭಟ್ ದಂಪತಿ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಿ.ಎಸ್. ತನುಜಾ ಸೂರಣಗಿ ಅವರನ್ನು ಸನ್ಮಾನಿಸಲಾಯಿತು. ಅಪೇಕ್ಷಾ ಮತ್ತು ಸಾನ್ವಿಕಾ ಭರತನಾಟ್ಯ ಪ್ರದರ್ಶಿಸಿದರು. ಎವರಾನ್ ಶಾಲೆ ಅಧ್ಯಕ್ಷ ಎಂ.ಎಸ್.ಕಾರ್ತಿಕ್ ಸಾಹುಕಾರ್ ಆತಿಥ್ಯ ವಹಿಸಿದ್ದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಎನ್.ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಎಂ.ಸೈಯದ್ ಅನ್ಸರ್, ಪ್ರಧಾನ ಕಾರ್ಯದರ್ಶಿ ರೇವಣಪ್ಪ ಬಿದರಗೇರಿ, ಕಜಾಪ ಗೌರವಾಧ್ಯಕ್ಷ ರಾಜಪ್ಪ ಮಾಸ್ತರ್, ತಾಲೂಕು ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಎವರಾನ್ ಶಾಲೆಯ ಮುಖ್ಯಸ್ಥೆ ಚರಿತಾ ಕಾರ್ತಿಕ್ ಸಾಹುಕಾರ್, ಮುಖ್ಯ ಶಿಕ್ಷಕಿ ನೇತ್ರಾ ಡಿ.ಬಾಸೂರು, ನಿವೃತ್ತ ತಹಸೀಲ್ದಾರ್ ಧಮೋಜಿ ರಾವ್, ಕೃಷ್ಣಮೂರ್ತಿ, ಕರವೇ ಆನವಟ್ಟಿ ಘಟಕದ ಅಧ್ಯಕ್ಷ ಟಿ.ಪಿ.ಅಜಿತ್​ಕುಮಾರ್, ಉಪಾಧ್ಯಕ್ಷ ವಿಜಯಕುಮಾರ್, ಯುವ ಘಟಕದ ಅಧ್ಯಕ್ಷ ಎಸ್.ಎ.ಅಮಿತ್, ಉಪಾಧ್ಯಕ್ಷ ಪವನ್ ಇಳಿಗಾರ್ ಇತರರಿದ್ದರು. ಜಿ.ಅನá-ಶ್ರೀ, ಎನ್.ಕೆ.ಸೃಜನಿ ನಿರೂಪಿಸಿದರು. ವಿ.ಆರ್.ನಿಶಾ ಸ್ವಾಗತಿಸಿದರು. ಬಿ.ಎನ್.ದೀಪಾ ವಂದಿಸಿದರು.