ಜಿಲ್ಲೆ

ಇಂಜಿನಿಯರ್‌ಗಳಿಂದ ದೇಶದ ಪ್ರಗತಿ : ಪ್ರತಾಪ ಸಿಂಹನಾಯಕ್ ಬಣ್ಣನೆ

ಸೌಮ್ಯ ಆರ್

ಬೆಳ್ತಂಗಡಿ: ದೇಶದ ಪ್ರಗತಿಗೆ ಇಂಜಿನಿಯರ್‌ಗಳ ಸೇವೆ ಮತ್ತು ಕೊಡುಗೆ ಅಮೂಲ್ಯ ಎಂದು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.

ಗುರುವಾರ ಉಜಿರೆಯಲ್ಲಿ ಇಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಇಂಜಿನಿಯರಿಂಗ್ ವಿಧೇಯಕ-2024 ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿವಿಲ್ ಇಂಜಿನಿಯರ್‌ಗಳ ರಾಜ್ಯಮಟ್ಟದ ಸಂಘಟನೆ ಅಧ್ಯಕ್ಷ ಶ್ರೀಕಾಂತ್ ಎಸ್.ಚನ್ನಲ್ ಮಾತನಾಡಿ, ಸಿವಿಲ್ ಇಂಜಿನಿಯರ್‌ಗಳು, ರಾಷ್ಟ್ರ ನಿರ್ಮಾಪಕರು. ಒಂದು ದೇಶದ ಕಟ್ಟಡ ವಿನ್ಯಾಸ ಜನರ ಸಂಸ್ಕೃತಿ ಮತ್ತು ನಾಗರಿಕತೆ ಪ್ರತಿಬಿಂಬಿಸುತ್ತದೆ. ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣದಲ್ಲಿ ಸಿವಿಲ್ ಇಂಜಿನಿಯರ್‌ಗಳ ಸೇವೆ ಅಮೂಲ್ಯ. ಕೇಂದ್ರಸರ್ಕಾರ 10 ಲಕ್ಷ ಕೋಟಿ ರೂ. ಹಾಗೂ ಖಾಸಗಿ ವಲಯದ ಉದ್ಯಮಗಳ 18 ಲಕ್ಷ ಕೋಟಿ ರೂ. ಸೇರಿ ಒಟ್ಟು 28 ಲಕ್ಷ ಕೋಟಿ ರೂ. ಸಿವಿಲ್ ಕಟ್ಟಡ ಕಾಮಗಾರಿಗಳಿಗಾಗಿ ವಿನಿಯೋಗಿಸಲಾಗಿದೆ ಎಂದರು.

ಉಜಿರೆಯ ಜಗದೀಶ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಂತ್ರಿಕ ಮಾಹಿತಿ ಹಾಗೂ ಅರ್ಹತೆ ಇಲ್ಲದವರು ಸಿವಿಲ್ ಇಂಜಿನಿಯರ್‌ಗಳ ಮೇಲೆ ಮಾಡುವ ಆಪಾದನೆ ಹಾಗೂ ದಬ್ಬಾಳಿಕೆ ತಡೆಯಲು ಸಂಘಟನೆ ಹಾಗೂ ವಿಧೇಯಕ ಅನಿವಾರ್ಯ ಎಂದರು.

ಲೋಗೋ ಅನಾವರಣಗೊಳಿಸಲಾಯಿತು. ಬೆಂಗಳೂರು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಂ.ಯು.ಅಶ್ವಥ್, ಅಜಿತ್ ಕುಮಾರ್ ಮತ್ತು ಎಂ.ಆರ್.ಕಲ್‌ಗಲ್ ಅನಿಸಿಕೆ ತಿಳಿಸಿದರು. ವಿಶೇಷ ಸಾಧನೆ ಮಾಡಿದ ಸಿವಿಲ್ ಇಂಜಿನಿಯರ್‌ಗಳಾದ ಉಜಿರೆಯ ಜಗದೀಶಪ್ರಸಾದ್, ಸಂಪತ್‌ರತ್ನ ರಾವ್ ಮತ್ತು ಸುಭಾಶ್ಚಂದರ್ ಅವರನ್ನು ಗೌರವಿಸಲಾಯಿತು.

ಉಜಿರೆಯ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ರವೀಶ್ ಪಡುಮಲೆ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಮೊದಲು ಆಕರ್ಷಕ ವಾಹನ ಜಾಥಾ ನಡೆಯಿತು.

ಕಳಪೆ ಕಾಮಗಾರಿ

ಪರಿಣತ ಹಾಗೂ ಅಧಿಕೃತ ಸಿವಿಲ್ ಇಂಜಿನಿಯರ್‌ಗಳು ಕಟ್ಟಡ ಕಾಮಗಾರಿಯಲ್ಲಿ ಭಾಗವಹಿಸದೆ ತಾಂತ್ರಿಕ ಜ್ಞಾನದ ಕೊರತೆಯಿಂದಾಗಿ ಕಟ್ಟಡಗಳ ಕುಸಿತ, ಸೇತುವೆಗಳಲ್ಲಿ ಬಿರುಕು, ರಸ್ತೆಗಳ ಕಳಪೆ ಕಾಮಗಾರಿ, ಅಣೆಕಟ್ಟುಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳು ಉಂಟಾಗುತ್ತಿವೆ. ಆದುದರಿಂದ ಅಧಿಕೃತ ಪರವಾನಗಿ ಪಡೆದ ಸಿವಿಲ್ ಇಂಜಿನಿಯರ್‌ಗಳೇ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಬೇಕು. ಇದಕ್ಕಾಗಿ ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಇಂಜಿನಿಯರಿಂಗ್ ವಿಧೇಯಕ ಅನಿವಾರ್ಯ. ಈಗಾಗಲೇ ವಿಧೇಯಕವು ಸರ್ಕಾರ ಮತ್ತು ಉಭಯಸದನಗಳಲ್ಲಿ ಅನುಮೋದನೆಗೊಂಡಿದ್ದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ ಎಂದು ಶ್ರೀಕಾಂತ್ ಎಸ್.ಚನ್ನಲ್ ಹೇಳಿದರು.