ರಾಣೆಬೆನ್ನೂರ: ನಿಮ್ಮ ಖಾತೆಯಲ್ಲಿರುವ ಹಣ ಲೀಗಲ್ ಅಥವಾ ಇಲ್ಲೀಗಲ್ ಎಂದು ಪರಿಶೀಲಿಸಬೇಕು ಎಂದು ಹೇಳಿ ಸಾಫ್ಟವೇರ್ ಇಂಜಿನಿಯರ್‌ವೊಬ್ಬರಿಗೆ ಸೈಬರ್ ಖರೀಮರು 3.28 ಲಕ್ಷ ರೂ. ಹಣ ಹಾಕಿಸಿಕೊಂಡು ಮೋಸ ಮಾಡಿದ ಕುರಿತು ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಮಾರುತಿ ರಾಮಪ್ಪ ಬಣಗಾರ (33) ಮೋಸ ಹೋದವರು.
ಇವರಿಗೆ ಫೋನ್ ಮಾಡಿದ ಅಪರಿಚಿತ ವ್ಯಕ್ತಿಗಳು ನಿಮ್ಮ ಹೆಸರಿನಲ್ಲಿ ಹೊರ ದೇಶಕ್ಕೆ 25 ಪ್ಯಾಕೇಟ್ ಎಲ್‌ಎಸ್‌ಡಿ, 2 ಲ್ಯಾಪಟಾಪ್, 4 ಅವಧಿ ಮುಗಿದ ಪಾಸ್‌ಪೋರ್ಟ್ ಹೋಗುತ್ತಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಂದ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕು ಎಂದು ಹೇಳಿ ನಂಬಿಸಿದ್ದಾರೆ. ನಂತರ ಇವರ ಮೊಬೈಲ್‌ನಲ್ಲಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಬ್ಯಾಂಕ್ ಖಾತೆಯಿಂದ 3.28 ಲಕ್ಷ ರೂ. ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.