ವಿಜಯವಾಣಿ ಸುದ್ದಿಜಾಲ ಧಾರವಾಡ
ವೃತ್ತಿಯಲ್ಲಿ ಯಶಸ್ಸು ಪಡೆಯುವ ಉತ್ಸಾಹ ಇರಬೇಕು. ಪ್ರತಿಯೊಬ್ಬರು ತಮ್ಮ ಕೆಲಸವನ್ನು ಸರಿಯಾಗಿ ರೂಪಿಸಿ ಅದರ ಉದ್ದೇಶವನ್ನು ಇತರರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಎಸ್ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ್ ಹೇಳಿದರು.
ನಗರದ ಎಸ್ಡಿಎಂ ದಂತ ಮಹಾವಿದ್ಯಾಲಯದ ಹುಳುಕು ಹಲ್ಲು ಚಿಕಿತ್ಸಾ ವಿಭಾಗದಿಂದ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ಅಸೋಸಿಯೇಷನ್ ಆಫ್ ಕನ್ಸ್ರ್ವೇಟಿವ್ ಡೆಂಟಿಸ್ಟ್ರಿ ಹಾಗೂ ಎಂಡೊಡಾಂಟಿಕ್ಸ್ 3ನೇ ವಾರ್ಷಿಕ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ಪ್ರೀತಿಯಿಂದ ಕೆಲಸ ಮಾಡಬೇಕು. ಗುರಿ ತಲುಪಲು ಅಥವಾ ಯಶಸ್ಸು ಪಡೆಯವ ಸಮಯದಲ್ಲಿ ಎದುರಾಗುವ ಟೀಕೆ ಮತ್ತು ವೈಫಲ್ಯಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಯಶಸ್ಸು ಪಡೆಯಲು ಪ್ರತಿಯೊಬ್ಬರೂ ತಮ್ಮಲ್ಲಿನ ಭಯ, ಸಂಕೋಚ ಮತ್ತು ನಕಾರಾತ್ಮಕತೆ ಬಿಡಬೇಕು. ನಾವು ನಮ್ಮ ರೋಗಿಗಳ ಕಾಳಜಿ ವಹಿಸುವುದರೊಂದಿಗೆ ಅವರನ್ನು ಗುಣಪಡಿಸಬೇಕು ಎಂದರು.
ಎಸಿಇ ರಾಜ್ಯಾಧ್ಯಕ್ಷೆ ಡಾ. ರಮ್ಯಾ ಮಾತನಾಡಿದರು. ಉತ್ತಮ ಸಾಧನೆ ಮಾಡಿದ ದಂತ ವೈದ್ಯರಿಗೆ ಸನ್ಮಾನಿಸಲಾಯಿತು. ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಡಾ. ಗೀತಾ ಹಿರೇಮಠ, ಎಸ್ಡಿಎಂ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ, ಇತರರು ಇದ್ದರು.