ಜಿಲ್ಲೆ

6ನೇ ಗ್ಯಾರಂಟಿ ಜಾರಿ ಮಾಡಿ

Gadag - Desk - Tippanna Avadoot

ಹಿರೇಕೆರೂರ; ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಷನ್ ವತಿಯಿಂದ ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರ‍್ಯಾಲಿ ಮೂಲಕ ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.


ತಾಲೂಕು ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಕುಸುಮಾ ಪಾಟೀಲ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು, ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸರ್ಕಾರ ಘೊಷಿಸಿದ 6ನೇ ಗ್ಯಾರಂಟಿಯನ್ನು ಕೂಡಲೇ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಎಲ್​ಕೆಜಿ ಮತ್ತು ಯುಕೆಜಿ ತರಗತಿ ನಡೆಸಲು ವಿಶೇಷ ಸೌಲಭ್ಯ ಒದಗಿಸಬೇಕು. ಗ್ರಾಚ್ಯುಟಿ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಅರ್ಹರು ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.


ಫೆಡರೇಷನ್ ಉಪಾಧ್ಯಕ್ಷೆ ಎಫ್.ಎಂ. ಪಾಟೀಲ, ಕಾರ್ಯದರ್ಶಿ ಪಾರ್ವತಿ ಹಾದ್ರಿಹಳ್ಳಿ, ಫರೀದಾಬಾನು ಪಾಟೀಲ, ಸುನಿತಾ ಮರಕಳ್ಳಿ, ರೇಷ್ಮಾ ಬಾನು, ನಿರ್ಮಲಾ ದೊಡ್ಡಬಸಣ್ಣನವರ, ರೇಖಾ ಕೊಪ್ಪದ, ಪಾರ್ವತಿ ಎತ್ತಿನಮನಿ, ಪುಟ್ಟಮ್ಮ ಬಂಡೇರ, ವಿಜಯಾ ಬಣಕಾರ, ಮಂಜುಳಾ ನಾಗಣ್ಣನವರ, ಪುಷ್ಪಾ ಬಾದಾಮಿ, ಚೈತ್ರಾ ಕಟ್ಟಿಮನಿ, ಮಂಜುಳಾ ಹುಡೇದ ಹಾಗೂ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.