ಜಿಲ್ಲೆ

ರಾಮನಗರದಲ್ಲಿ ಮುಗಿಯದ ರಸ್ತೆ ಗುಂಡಿ ಗಂಡಾಂತರ

ಗಂಗಾಧರ ಬಿ ವಿ

*ಕರಗ ಹಬ್ಬಕ್ಕಾದರೂ ದುರಸ್ತಿ ಮಾಡಿಸಲು ಸಾರ್ವಜನಿಕರ ಮನವಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದ ರಸ್ತೆಗಳು ಗುಂಡಿಮಯವಾಗಿದ್ದು, ಕರಗ ಹಬ್ಬಕ್ಕಾದರೂ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಿ ರಸ್ತೆ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕುಡಿಯುವ ನೀರು ಸಂಪರ್ಕ ಇತರ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಡಾಂಬರೀಕರಣ, ಸಿಮೆಂಟ್ ರಸ್ತೆಗಳು ಗುಂಡಿಬಿದ್ದಿವೆ. ಕೆಲ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ನಡೆಸಿದರೂ ಗಲ್ಲಿ ರಸ್ತೆಗಳ ಅವ್ಯವಸ್ಥೆ ಹಾಗೇ ಇವೆ.

ಪ್ರತಿ ಆಷಾಢ ಮಾಸದಲ್ಲಿ ರಾಮನಗರ ಹಬ್ಬದ ಸಡಗರದಲ್ಲಿ ಮಿಂದೇಳುತ್ತದೆ. 9 ಶಕ್ತಿ ದೇವತೆಗಳ ಕರಗ ಮಹೋತ್ಸವ ವೈಭವವಾಗಿ ನಡೆಯುತ್ತದೆ. ಕರಗ ಹಬ್ಬಕ್ಕಾಗಿ ಇಡೀ ನಗರ ಸಿಂಗಾರಗೊಂಡು ಹಬ್ಬದ ವೈಭವವನ್ನು ಸಾರುತ್ತದೆ. ಮಿನಿ ಮೈಸೂರು ದಸರಾ ಹಬ್ಬದಂತೆ ಶಕ್ತಿದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಬೀದಿ ಬೀದಿಗಳಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ತಾತ್ಕಾಲಿಕವಾದರೂ ಗುಂಡಿ ಮುಚ್ಚುವ ಕೆಲಸಕ್ಕೆ ನಗರಸಭೆ ಮುಂದಾಗಬೇಕಿದೆ.

ರಾಮನಗರದ ಪ್ರಸಿದ್ಧ ಚಾಮುಂಡೇಶ್ವರಿ, ಬನ್ನಿಮಹಾಂಕಾಳಿ ಅಮ್ಮ ಮತ್ತು ನಗರದೇವತೆಗಳ ಅದ್ದೂರಿ ಕರಗ ನಗರದ ಬಹುತೇಕ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತವೆ. ಗುಂಡಿಗಳಿರುವ ಕಾರಣ ಕರಗ ಹೋಗುವ ಸಮಯದಲ್ಲಿ ಓಡಾಟಕ್ಕೆ ತೊಂದರೆಯಾಗಲಿದೆ. ಇದರಿಂದ ರಸ್ತೆಗಳಲ್ಲಿರುವ ಗುಂಡಿ ಮುಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಬಾಲಗೇರಿ ನಿವಾಸಿ ಮುರುಗೇಶ್ ಆಗ್ರಹಿಸಿದ್ದಾರೆ.

ಗುಂಡಿಬಿದ್ದ ಪ್ರಮುಖ ಬೀದಿ ರಸ್ತೆಗಳು

ಬಳೇಪೇಟೆ, ಜೀವಣ್ಣರಾಯರಗಲ್ಲಿ, ಬಾಲಗೇರಿ ರಸ್ತೆ, ಗಾಂಧೀನಗರ ರಸ್ತೆ, ಹಳೇ ಬಸ್ ನಿಲ್ದಾಣ ರಸ್ತೆ, ಛತ್ರದಬೀದಿ, ಅಗ್ರಹಾರ, ಮಂಡೀಪೇಟೆ ರಸ್ತೆ ಅರಳೇಪೇಟೆ, ಕುಂಭಾರಬೀದಿ, ಹುಣಸನಹಳ್ಳಿ ರಸ್ತೆ, ಕೊತ್ತೀಪುರ ರಸ್ತೆ, ಅರ್ಕೇಶ್ವರ ಕಾನಿ, ಮೋತಿನಗರ ಮುಖ್ಯರಸ್ತೆ, ನೇರಳೇಕೇರಿ, ಬಾಲಗೇರಿ ರಸ್ತೆಗಳು, ಕರಗದಬೀದಿ, ರಾಘವೇಂದ್ರ ಕಾನಿ, ಹನುಮಂತನಗರ, ಮಲ್ಲೇಶ್ವರ ಬಡಾವಣೆ, ಐಜೂರು ಭಾಗದ ಬಡಾವಣೆ ರಸ್ತೆಗಳು ಸೇರಿ ಹಲವು ಬೀದಿ ರಸ್ತೆಗಳಲ್ಲಿ ರಸ್ತೆ ಗುಂಡಿಬಿದ್ದಿವೆ.

ನಗರದ ಬೀದಿ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಈಗಾಗಲೇ ಶಾಸಕರು ಸೂಚಿಸಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಗುಂಡಿ ಮುಚ್ಚಲು ತಿಳಿಸಲಾಗಿದೆ. ಒಂದೆರಡು ದಿನಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಬಗೆಹರಿಯುತ್ತದೆ.ನಾಗೇಶ್, ಪೌರಾಯುಕ್ತ, ನಗರಸಭೆಕಳೆದ 2 ವರ್ಷದಿಂದಲೂ ನಗರದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸಲಾಗುತ್ತಿದೆ ಎನ್ನುತ್ತಿದ್ದಾರೆ. ರಸ್ತೆಯಲ್ಲಿ ಧೂಳು, ಗುಂಡಿಗಳಾಗಿವೆ. ಜನರು ಓಡಾಟ ಸಾಧ್ಯವಾಗುತ್ತಿಲ್ಲ. ಚಾಮುಂಡೇಶ್ವರಿ, ಬನ್ನಿಮಹಾಂಕಾಳಿ ನಗರದೇವತೆಗಳ ಕರಗದ ಹಬ್ಬ ಬಂದರೂ ರಸ್ತೆ ಇನ್ನೂ ಗುಂಡಿಮಯವಾಗಿಯೇ ನಿಂತಿವೆ. ಕರಗ ಹಬ್ಬಗಳಿಗಾದರೂ ಗುಂಡಿ ಮುಚ್ಚಲು ನಗರಸಭೆ ಮನಸ್ಸು ಮಾಡಬೇಕು.ಜಿ.ಟಿ. ಕೃಷ್ಣ, ನಿವಾಸಿ