ವಿಜಯವಾಣಿ ಸುದ್ದಿಜಾಲ ಉಡುಪಿ
ಲಾಲ್ ಬಹದೂರ್ ಶಾಸ್ತ್ರಿ ಅವರು ಘೋಷಿಸಿದ್ದ ಜೈಜವಾನ್-ಜೈಕಿಸಾನ್ ಮಾತು ಸಾರ್ವಕಾಲಿಕ. ಜವಾನ್-ಕಿಸಾನ್ ಇಲ್ಲದಿದ್ದರೆ ನಾವುಗಳು ಯಾರೂ ಬದುಕಲು ಸಾಧ್ಯವೇ ಇಲ್ಲ. ಹೀಗಾಗಿ ಅವರಿಬ್ಬರೂ ದೇಶದ ಜನತೆಯ ಉಸಿರು ಎಂದು ಕರ್ಣಾಟಕ ಬ್ಯಾಂಕ್ನ ಎಜಿಎಂ ವಾದಿರಾಜ್ ಭಟ್ ಅಭಿಮತ ವ್ಯಕ್ತಪಡಿಸಿದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ರಜತ ಸಂಭ್ರಮದ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠ, ಜಿಲ್ಲಾ ಕೃಷಿಕ ಸಂಘ ಹಾಗೂ ರೋಟರಿ ಐಸಿರಿ ಪರ್ಕಳ ಇವರ ಸಹಭಾಗಿತ್ವದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಬೃಹತ್ ಕೃಷಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜವಾನ್-ಕಿಸಾನ್ ಇಬ್ಬರಿಗೂ ನಮ್ಮೆಲ್ಲರ ಪ್ರೋತ್ಸಾಹ ಲಭಿಸಿದರೆ ಅವರು ನಮ್ಮನ್ನೆಲ್ಲ ರಕ್ಷಿಸುತ್ತಾರೆ. ನಗರದಲ್ಲಿರುವ ಮಕ್ಕಳಿಗೆ ಹಾಲು ಮತ್ತು ಅಕ್ಕಿ ಹೇಗೆ ಉತ್ಪನ್ನವಾಗುತ್ತದೆ ಎಂಬ ಸಣ್ಣ ಮಾಹಿತಿಯೂ ಇಲ್ಲದಾಗಿದೆ. ಅಷ್ಟರ ಮಟ್ಟಿಗೆ ಕೃಷಿಯಿಂದ ವಿಮುಖರಾಗುತ್ತಿದ್ದೇವೆ. ಕರ್ಣಾಟಕ ಬ್ಯಾಂಕ್ ಸಹ ರೈತರಿಗಾಗಿಯೇ 1924ರಲ್ಲಿ ಆರಂಭವಾಗಿತ್ತು. ಇದೀಗ ರಾಜ್ಯವಷ್ಟೇ ಅಲ್ಲದೆ ದೇಶಾದ್ಯಂತ ಶಾಖೆ ಹೊಂದಿದ್ದು, ಭಾರತದ ಕರ್ಣಾಟಕ ಬ್ಯಾಂಕ್ ಎಂದು ಗುರುತಿಸಿಕೊಳ್ಳಲಿದೆ ಎಂದರು.
ಜಿಲ್ಲಾ ಕೃಷಿಕ ಸಂದ ಪ್ರ.ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಮಾತನಾಡಿ, ಕೃಷಿ ಮಾಡಲು ಆಸಕ್ತಿ ಇರುವವರಿಗೆ ಜಾಗದ ಸೌಲಭ್ಯ ಒದಗಿಸಿಕೊಟ್ಟು, ಕೃಷಿ ತರಬೇತಿಯನ್ನೂ ನೀಡಲಾಗುವುದು. ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಹಾಗೂ ದೇಶೀಯ ಹಸು ಸಾಕಣೆಗೂ ಸಹ ಮಾರ್ಗದರ್ಶನ ನೀಡಲಾಗುವುದು ಎಂದರು.
ರೋಟರಿ ಐಸಿರಿಯ ಕಾರ್ಯದರ್ಶಿ ಗೀತಾ ಉಪಾಧ್ಯಾಯ, ಜಿಲ್ಲಾ ಬ್ರಾಹ್ಮಣ ಮಹಿಳಾ ಮಹಾಸಭಾದ ಅಧ್ಯಕ್ಷೆ ಕಾಂತಿ, ಪುತ್ತಿಗೆ ಮಠದ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಮಾತನಾಡಿದರು. ಶ್ರೀನಿವಾಸ್ ಯು.ಬಿ., ಶ್ರೀಕಾಂತ್ ಉಪಾಧ್ಯ ಉಪಸ್ಥಿತರಿದ್ದರು. ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿಯ ಕುರಿತಾಗಿ ವಿವಿಧ ಮಾಹಿತಿ ಗೋಷ್ಠಿಗಳು ನಡೆದವು.
ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಸ್ವಾಗತಿಸಿದರು. ಜಯರಾಮ್ ಆಚಾರ್ಯ ವಂದಿಸಿದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಮಧುಮೇಹ ತಜ್ಞೆ ಡಾ. ಶುೃತಿ ಬಲ್ಲಾಳ್ ರೈತರು ಹಾಗೂ ಆಹಾರ ಕ್ರಮಗಳ ಕುರಿತು ಉಪನ್ಯಾಸ ನೀಡಿ, ರೈತರು ಈ ದೇಶದ ಬೆನ್ನೆಲುಬಷ್ಟೇ ಅಲ್ಲ, ನಮ್ಮ ಎಲ್ಲ ಅಂಗವೂ ಸಹ ರೈತರೇ ಆಗಿದ್ದಾರೆ. ರೈತರೇ ವೈದ್ಯರೂ ಸಹ. ಅವರು ಬೆಳೆಯುವ ಬೆಳೆಯಿಂದ ನಮ್ಮೆಲ್ಲರ ಜೀವ, ಜೀವನ ಬೆಳೆಯುತ್ತದೆ. ಮಧುಮೇಹಿಗಳು ಹಾಗೂ ಮಧುಮೇಹಿಗಳಲ್ಲದವರೂ ಸಹ ರೈತರು ಬೆಳೆದ, ಪರಿಸರ ಹಾಗೂ ಕಾಲಕ್ಕೆ ಪೂರಕವಾದ ಆಹಾರವನ್ನೇ ಸೇವಿಸಬೇಕು. ಜಾಹೀರಾತು ನೀಡುವವರ ಔಷಧದಿಂದ ರೋಗ ವಾಸಿಯಾಗದು. ನಾವು ನಿತ್ಯ ತಿನ್ನುವ ಆಹಾರವೇ ಮದ್ದಾಗಬೇಕು. ಫಾಸ್ಟ್ ಜೀವನದಲ್ಲಿ ಫಾಸ್ಟ್ ಫುಡ್ ತಿನ್ನಬೇಡಿ. ಪ್ರಕೃತಿದತ್ತ ಹಣ್ಣುಗಳು, ರೈತ ಬೆಳೆದ ಧಾನ್ಯಗಳನ್ನು ಸೇವಿಸಿದರೆ ಅನಾರೋಗ್ಯ ಕಾಡದು ಎಂದರು.
ಇದು ರಾಜಕೀಯೇತರ ಹಾಗೂ ಎಲ್ಲ ಜಾತಿ-ಧರ್ಮದವರು ಸೇರಿಕೊಂಡು ನಡೆಸಿದ ಸುಂದರ ಕಾರ್ಯಕ್ರಮ. ಕೃಷಿಮೇಳದ ನಿಮಿತ್ತ ಕೃಷಿಗೆ ಪೂರಕವಾದ ವಿವಿಧ ಸ್ಟಾಲ್ಗಳ ಜತೆಗೆ ರೈತ ಉತ್ಪನ್ನಗಳಿಗೂ ಪ್ರೋತ್ಸಾಹ ನೀಡಲು 87 ವಿವಿಧ ಸ್ಟಾಲ್ ಹಾಕಲಾಗಿದ್ದು 8 ಸಾವಿರಕ್ಕೂ ಅಧಿಕ ಜನ ಪ್ರಯೋಜನ ಪಡೆದಿದ್ದಾರೆ. ಶ್ರೀನಿವಾಸ್ ಬಲ್ಲಾಳ್. ಅಧ್ಯಕ್ಷ, ರಜತ ಮಹತ್ಸವ ಸಮಿತಿ