ಸಂಗ್ರಹಗೊಂಡ ಸೀರೆಗಳ ಉಗ್ರಾಣ. 
ಜಿಲ್ಲೆ

ಅಳಿವಿನಂಚಿಗೆ ಸಾಗುತ್ತಿರುವ ನೇಕಾರಿಕೆ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ/ಬನಹಟ್ಟಿ: ಉತ್ತರ ಕರ್ನಾಟಕದ ‘ಮ್ಯಾಂಚೇಸ್ಟರ್’ ಎಂದೇ ಖ್ಯಾತಿ ಪಡೆದಿದ್ದ ರಬಕವಿ- ಬನಹಟ್ಟಿ ಅವಳಿ ನಗರಗಳು ಇದೀಗ ನವೀಕರಣವಿಲ್ಲದ ಕಾರಣ ಜವಳಿ ಕ್ಷೇತ್ರ ಉಳಿವಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿರುವುದು ನಿಜಕ್ಕೂ ದುರಂತದ ಸ್ಥಿತಿ.

ನೇಕಾರಿಕೆಗೆ ಕಳೆದೆರಡು ಶತಮಾನಗಳ ಇತಿಹಾಸ ಹೊಂದಿರುವ ಈ ಪಟ್ಟಣಗಳು ಇದೀಗ ಅಳಿವಿನಂಚಿನ ತೂಗುಯ್ಯಲೆಯಲ್ಲಿವೆ. ಒಂದೆಡೆ ಮಾರುಕಟ್ಟೆ ನೆಲೆ ಸಿಗದೆ ವ್ಯಾಪಾರ ಹೀನಾಯ ಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ನವೀಕರಣಗೊಳ್ಳದ ಕಾರಣ ಅದೇ ಓಬೇರಾಯನ ಕಾಲದ ಮಗ್ಗಗಳಿಂದಲೇ ಸೀರೆ ಉತ್ಪಾದನೆ ಸವಾಲಾಗಿದೆ.

ಬದಲಾಗದ ನೇಯ್ಗೆ

ಕೈಮಗ್ಗ ನಂತರ ಆಟೋಮ್ಯಾಟಿಕ್ ನಂತರ ಪವರ್‌ಲೂಮ್‌ಗೆ ಪರಿವರ್ತನೆ ಹೊಂದಿದ್ದ ನೇಕಾರರು ಕಳೆದ 50 ವರ್ಷಗಳಿಂದ ಕಿಂಚಿತ್ತೂ ಬದಲಾವಣೆಯಾಗದೆ ಅದೇ ಹಳೆಯ ಮಗ್ಗಗಳನ್ನೇ ಅವಲಂಬಿತರಾಗಿ ಹೊಸ ನೈಪುಣ್ಯತೆ, ವಿನ್ಯಾಸದೊಂದಿಗೆ ಬದಲಾವಣೆಯಾಗದಿರುವುದೇ ಜವಳಿ ಹಿನ್ನಡೆಗೆ ಪ್ರಮುಖ ಕಾರಣ.

ಅಲ್ಲದೆ ಯುವ ಪೀಳಿಗೆ ಈ ಉದ್ದಿಮೆದಾರರು ಇದರಲ್ಲಿ ಹಣ ಹೂಡಿಕೆಗೆ ಹಿಂಜರಿಯುತ್ತಿದ್ದಾರೆ. ಯಾಕೆಂದರೆ ಸೀರೆ ಮಾರಾಟ ಮಾಡಿ 6 ತಿಂಗಳಾದರೂ ಖರೀದಿದಾರರು ಹಣ ಮರಳಿಸುವುದಿಲ್ಲ. ಕೆಲವರಂತೂ ವರ್ಷವಾದರೂ ಹಣ ಬರುವುದಿಲ್ಲ, ಹೂಡಿಕೆಯ ಹಣದ ಬಡ್ಡಿ, ಮತ್ತೆ ಉದ್ದಿಮೆ ನಡೆಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೆ ಇರುವುದು ಕೂಡಾ ಹಿನ್ನೆಲೆಗೆ ಕಾರಣವಾಗಿದೆ.

ಸೌಕರ್ಯಗಳಿಲ್ಲ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜವಳಿ ಪ್ರಧಾನ ಕ್ಷೇತ್ರವಾಗಿರುವ ರಬಕವಿ- ಬನಹಟ್ಟಿ ತಾಲೂಕಿಗೆ ಪೂರಕ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಲಗೊಂಡಿದೆ. ಪ್ರಮುಖವಾಗಿ ಸೈಜಿಂಗ್, ವಾರ್ಪಿಂಗ್, ಕೋನ್ ಡೈಯಿಂಗ್, ನೂಲು ಅದಷ್ಟೇ ಅಲ್ಲದೆ ಜವಳಿ ಪಾರ್ಕ್ ಕೂಡ ಸ್ಥಾಪನೆಗೊಂಡಿಲ್ಲ.

ಅನ್ಯ ಉದ್ಯೋಗ

ಈಗಾಗಲೇ ಅನುಭವ ಹೊಂದಿರುವ ನೇಕಾರ ಮಾಲೀಕರು ಅನ್ಯ ಉದ್ಯೋಗಗಳತ್ತ ಸಾಗಿ, ಅಂದರೆ ಕಷಿ, ಕಬ್ಬಿಣ, ಸಿಮೆಂಟ್, ಮೊಹಾಲಗಳು ಹಾಗೂ ಇನ್ನಿತರ ಲಾಭದಾಯಕ ಉದ್ದಿಮೆಗಳತ್ತ ವಾಲಿ ಜವಳಿ ಕ್ಷೇತ್ರದಿಂದ ದೂರಾಗುತ್ತಿದ್ದಾರೆ. ಅದಕ್ಕೂ ಮಿಗಿಲಾಗಿ ದಿನದಿಂದ ದಿನಕ್ಕೆ ಯುವ ನೇಕಾರರು ನೇಕಾರಿಕೆಯತ್ತ ಸಾಗುವಲ್ಲಿ ಹಿಂದೇಟು ಹಾಕುತ್ತಿರುವುದು ಪ್ರಮುಖವಾಗಿದೆ. ನೇಕಾರಿಕೆ ಮಾಡುತ್ತಿದ್ದಾನೆ ಯುವಕ ಎಂದರೆ ಯಾರೊಬ್ಬರೂ ಕನ್ಯಾದಾನ ಮಾಡಲೂ ಮುಂದೆ ಬರುತ್ತಿಲ್ಲ. ಹೀಗಾಗಿ ಯುವಕರು ಮಗ್ಗ ನೇಯಲು ಹಿಂಜರಿದು, ಗೌಂಡಿ, ಮೇಸಿ ಸೇರಿದಂತೆ ಬೇರೆ ಬೇರೆ ವತ್ತಿಗೆ ವಾಲಿದ್ದಾರೆ.

ಹೈಟೆಕ್ ಮಗ್ಗಗಳು ಮೂಲೆಗುಂಪು

ಹೊಸ ವಿನ್ಯಾಸ, ತಾಂತ್ರಿಕದೊಂದಿಗೆ ರ‌್ಯಾಪಿಯರ್, ಕಂಪ್ಯೂಟರ್ ಜಕಾರ್ಡ್ ಸೇರಿದಂತೆ ಅನೇಕ ಮಗ್ಗಗಳು ಈಗಷ್ಟೇ ಅವಳಿ ನಗರದತ್ತ ದಾಪುಗಾಲು ಹಾಕಿವೆ. ಇವುಗಳ ನಿರ್ವಹಣೆ ದೊಡ್ಡ ಸವಾಲಾಗಿದ್ದು, ನೇಯ್ಗೆಯ ನೈಪುಣ್ಯತೆಗಾರರೂ ದೊರಕದ ಕಾರಣ ಮಾಲಿಕರು ಆರ್ಥಿಕ ಸಂಕಷ್ಟ ಎದುರಿಸುವುದರ ಜೊತೆಗೆ ಮಗ್ಗಗಳು ಧೂಳು ತಿನ್ನುವಲ್ಲಿ ಕಾರಣವಾಗಿದ್ದು, ಬೆರಳಣಿಕೆಯಷ್ಟು ಮಾಲೀಕರು ಮಾತ್ರ ಮಗ್ಗಗಳನ್ನು ಖರೀದಿಸಿದ್ದರಿಂದ ಇವರ ಹಾನಿಯಿಂದಾಗಿ ಇತರೆ ಮಾಲೀಕರು ಮಗ್ಗಗಳ ಖರೀದಿಗೆ ಹಿಂದೇಟು ಹಾಕುವುದು ಸಹಜವಾಗಿದೆ.

ಕಚ್ಚಾ ಸಾಮಗ್ರಿ ತಯಾರಿಕಾ ಘಟಕ ನೇಪಥ್ಯಕ್ಕೆ

ಸೀರೆ ಉತ್ಪಾದನೆಯಾಗಬೇಕಾದರೆ ಸುಮಾರು ಐದಾರು ವಿಭಾಗಗಳ ಘಟಕಗಳು ಅದರ ಹಿಂದೆ ಕೆಲಸಮಾಡಬೇಕಿದೆ. ಪ್ರಮುಖವಾಗಿ ವಾರ್ಪಿಂಗ್, ಸೈಜಿಂಗ್, ಬಣ್ಣ ಹಾಕುವಿಕೆ, ನೂಲು ಸುತ್ತುವಿಕೆ ಸೇರಿದಂತೆ ಅನೇಕವಿದ್ದವು. ಇದೀಗ ಸೀರೆ ನೇಯ್ಗೆಗೆ ಮಾರುಕಟ್ಟೆಯಲ್ಲಿ ತಯಾರಿ ನೂಲು ದೊರಕುತ್ತಿರುವದರಿಂದ ಕಚ್ಚಾ ಸಾಮಗ್ರಿಗಳ ಘಟಕಗಳು ಕೂಡಾ ಬಂದಾಗಿ ಕೆಲಸಗಾರರು ಕೆಲಸವಿಲ್ಲದೆ ಪರ್ಯಾಯ ಉದ್ಯೋಗಕ್ಕೆ ವಾಲುವುದು ಸಹಜವಾಗಿದೆ. ಅವಳಿ ನಗರದಲ್ಲಿ ದೊಡ್ಡದೊಡ್ಡ ಮಾಹಲಗಳು, ಉದ್ದಿಮೆಗಳು ತಲೆಎತ್ತಲು ಪ್ರಾರಂಭವಾಗಿದ್ದರಿಂದ ನೇಕಾರರು ಅದರತ್ತ ವಾಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾರೆ.

ಅಸಂಘಟಿತ: ಹಲವಾರು ಸಮಸ್ಯೆಗಳನ್ನು ಹೊತ್ತು ನಿಂತಿರುವ ಜವಳಿ ಕ್ಷೇತ್ರಕ್ಕೆ ಅಸಂಘಟನೆಯಿಂದ ಹೋರಾಟ ಅಥವಾ ಬೇಡಿಕೆಗಳಿಗೆ ಸ್ಪಂದನೆಗೆ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿ ಸರ್ಕಾರದ ವಿರುದ್ಧ ಸಿಡಿದೇಳುತ್ತಿದ್ದ ನೇಕಾರರು ಕಳೆದೊಂದು ದಶಕದಿಂದ ಪ್ರಖರ ಹಾಗು ಪ್ರಮುಖ ಹೋರಾಟಗಳಿಂದ ದೂರ ಉಳಿಯುವಲ್ಲಿ ಕಾರಣವಾಗಿದೆ.

ಯೋಜನೆಗಳಿಗೆ ಸೀಮಿತ: ಸರ್ಕಾರ ಕೊಡಮಾಡುವ ಯೋಜನೆಗಳಿಗೆ ಸೀಮಿತಗೊಂಡಿರುವ ನೇಕಾರರು ತಮ್ಮ ಕಾಯಕದ ನಿಷ್ಠೆ ಹಾಗೂ ಪ್ರಯತ್ನ ತೋರುವಲ್ಲಿ ವೈಲ್ಯ ಕಾಣುವಲ್ಲಿ ಕಾರಣವಾಗಿದ್ದು, ನೆರೆಯ ರಾಜ್ಯಗಳಲ್ಲಿನ ಅತಿ ವೇಗದ ಉದ್ಯೋಗ ಕ್ರಾಂತಿಗೆ ಕಿಂಚಿತ್ತೂ ಪೈಪೋಟಿ ಒಡ್ಡುವಲ್ಲಿ ಇಚ್ಛಾಶಕ್ತಿ ತೋರದಿರುವದು ವಿಪರ್ಯಾಸ.

ಮಗ್ಗಗಳು 20 ರಿಂದ 6 ಸಾವಿರಕ್ಕೆ

2005 ಕ್ಕಿಂತಲೂ ಮೊದಲು ಸುಮಾರು 20 ಸಾವಿರಗಳಷ್ಟು ಮಗ್ಗಗಳನ್ನು ಹೊಂದಿದ್ದ ರಬಕವಿ-ಬನಹಟ್ಟಿ ಪಟ್ಟಣಕ್ಕೆ ಕಾಲಿಟ್ಟರೆ ಸಾಕು ಮಗ್ಗಗಳ ಶಬ್ದದಿಂದಲೇ ತುಂಬುತ್ತಿತ್ತು. ಇದೀಗ ಕೇವಲ 6 ಸಾವಿರಕ್ಕೆ ಇಳಿಕೆ ಕಂಡು ಪಟ್ಟಣದ ಮಧ್ಯಭಾಗದಲ್ಲಂತು ಮಗ್ಗಗಳಿಗೆ ಹುಡುಕಾಟ ನಡೆಸಬೇಕಾದ ಸ್ಥಿತಿಯಾಗಿದೆ.

ಒಟ್ಟಾರೆ ಜವಳಿ ಕ್ಷೇತ್ರದಿಂದ ಮಂಕಾಗುವಲ್ಲಿ ಕಾರಣವಾಗುತ್ತಿರುವ ಈ ಭಾಗದ ನೇಕಾರರಿಗೆ ಸ್ವಯಂ ತಯಾರಿ ಜೊತೆಗೆ ಸರ್ಕಾರವೂ ಕೈ ಜೋಡಿಸಿದ್ದಲ್ಲಿ ಮೊದಲಿನ ಗತವೈಭವ ಮರುಕಳಿಸಲಿದೆ. ಇಲ್ಲವಾದಲ್ಲಿ ಮಗ್ಗಗಳ ಸಂಖ್ಯೆಯೊಂದಿಗೆ ನೇಕಾರರ ಸಂಖ್ಯೆಯೂ ಕಡಿಮೆಯಾಗುವುದರೊಂದಿಗೆ ಸಂಪೂರ್ಣ ಅವನತಿ ಕಾಣುವಲ್ಲಿ ಎರಡು ಮಾತಿಲ್ಲ.