ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅವರು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ನ್ಯಾಯಾಧೀಶರಾದ ಕೆ.ಬಿ.ಶಿವಪ್ರಸಾದ್, ಎಚ್.ಕೆ.ಉಮೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್ ಮತ್ತಿತರರು ಇದ್ದರು. 
ಜಿಲ್ಲೆ

ಅಪಾಯದ ಸನಿಹದಲ್ಲಿ ಜೀವಸಂಕುಲ, ಭೂಮಿ

ಎನ್.ವೆಂಕಟೇಶ್

ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಕಳವಳ- ಸ್ವಯಂಕೃತ ಅಪರಾಧಗಳಿಂದಲೇ ಪರಿಸರ ಮಾಲಿನ್ಯ

ಚಿಕ್ಕಬಳ್ಳಾಪುರ: ಮಾನವನ ಸ್ವಯಂಕೃತ ಅಪರಾಧಗಳೇ ಇಂದಿನ ಪರಿಸರ ಮಾಲಿನ್ಯಕ್ಕೆ ಕಾರಣ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಬೇಸರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ನಗರಸಭೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಾತಾವರಣದಲ್ಲಿ ಉಷ್ಣಾಂಶ ಮಿತಿಮೀರಿ ಏರಿಕೆಯಾಗುತ್ತಿದ್ದು, ಇದಕ್ಕೆ ಪ್ಲಾಸ್ಟಿಕ್ ಬಳಕೆ, ಜಲಮೂಲಗಳನ್ನು ಕಲುಷಿತಗೊಳಿಸುವ ಮಾನವನ ಸ್ವಯಂಕೃತ ಅಪರಾಧಗಳೇ ಪ್ರಮುಖ ಕಾರಣ. ಇಂದು ಜೀವಸಂಕುಲ, ಭೂಮಿ ಅಪಾಯಕ್ಕೆ ಸಿಲುಕಿದೆ ಎಂದರು.
ಇತ್ತೀಚೆಗೆ ದೇಶದ ರಾಜಧಾನಿ ದೆಹಲಿಯಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ 52.9 ಡಿಗ್ರಿ ಸೆಲ್ಸಿಯಸ್ ಎಂಬುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಇತರ ನಗರಗಳಲ್ಲೂ ಇಂತಹ ಪರಿಸ್ಥಿತಿ ಕಾಣಿಸಿಕೊಳ್ಳಬಹುದು. ಈಗಲಾದರೂ ಪರಿಸರ ಸಂರಕ್ಷಣೆ ಕೆಲಸವಾಗದಿದ್ದರೆ ಜೀವಸಂಕುಲಕ್ಕೆ ಭೂಮಿ ಕರಾಳವಾಗಲಿವೆ. ಈ ಅಪಾಯಕಾರಿ ದಿನಗಳೂ ತುಂಬಾ ದೂರವೇನಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಪ್ರತಿಯೊಬ್ಬರಿಗೂ ಹಸಿರೇ ಉಸಿರಾಗಬೇಕು. ಪರಿಸರ ಅತ್ಯಮೂಲ್ಯವಾದುದು. ಇದರ ಮಹತ್ವವನ್ನು ಅರಿಯಬೇಕು. ಮನೆ ಸುತ್ತ, ನಿವೇಶನಗಳಲ್ಲಿ, ರಸ್ತೆ ಬದಿಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬೇಕು ಎಂದರು.

ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ.ಉಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮುರಳಿ ಮೋಹನ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್ ರಮೇಶ್, ಪರಿಸರ ಅಧಿಕಾರಿ ಟಿ.ಎಂ. ಸಿದ್ದೇಶ್ವರ ಬಾಬು, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಪಿ.ಬೈಲಾಂಜನಪ್ಪ, ಪೌರಾಯುಕ್ತ ಎ.ಎಸ್.ಮಂಜುನಾಥ್, ವಕೀಲರಾದ ಶ್ರುತಿ, ಭಾರತಿ ಮತ್ತಿತರರು ಇದ್ದರು.


ಬಹುಮಾನ ವಿತರಣೆ
ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡಲಾಯಿತು. ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಬಳಿಕ ಪ್ಲಾಸ್ಟಿಕ್ ನಿಷೇಧದ ಕುರಿತ ಜಾಗೃತಿ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.