ಜಿಲ್ಲೆ

ರೈತನ ಆಪದ್ಭಾಂದವನ ಅಂತ್ಯ

ಮಡಿಕೇರಿ:

ಕರ್ನಾಟಕ ಸೇರಿದಂತೆ ದೇಶದಾದ್ಯಂತ ರೈತರಿಗೆ ಹವಾಮಾನ ಮುನ್ಸೂಚನೆ ನೀಡುವ ಮೂಲಕ ಕೃಷಿ ವಲಯಕ್ಕೆ ಆಪದ್ಭಾಂದವನಂತೆ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಕೃಷಿ ಹವಾಮಾನ ಘಟಕಗಳು ಮಾರ್ಚ್‌ನಿಂದ ಕೆಲಸ ನಿರ್ವಹಿಸುವುದು ಅನುಮಾನ. ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ನಿರ್ವಹಣೆ ಆಗುತ್ತಿದ್ದ ಈ ಕೇಂದ್ರಗಳ ಎಲ್ಲಾ ಚಟುವಟಿಕೆಗಳನ್ನು ಫೆಬ್ರವರಿ ಅಂತ್ಯಕ್ಕೆ ನಿಲ್ಲಿಸುವಂತೆ ಈಗಾಗಲೇ ನಿರ್ದೇಶನ ಬಂದಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಜ್ಞರ ಸೇವೆಯನ್ನೂ ಫೆಬ್ರವರಿ ಕೊನೆಗೆ ಸ್ಥಗಿತಗೊಳಿಸುವ ಸೂಚನೆ ಸಿಕ್ಕಿದೆ.

ಭಾರತದಲ್ಲಿ ಕೃಷಿ ಹವಾಮಾನವನ್ನು ಅದರಲ್ಲೂ ಮಳೆ ಮಾರುತಗಳನ್ನು ಅವಲಂಭಿಸಿದೆ. ವಾಯುಗುಣ ಮತ್ತು ಹವಾಮಾನ ವೈಪರಿತ್ಯ ದೇಶದ ಆಹಾರದ ಬೆಳೆವಣಿಗೆಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿ ವರ್ಷ ಹವಾಮಾನಕ್ಕೆ ಸಂಬಂಧಿಸಿದ ಅತಿವೃಷ್ಠಿ, ಚಂಡಮಾರುತ, ಆಲಿಕಲ್ಲು ಮಳೆ, ಅನಾವೃಷ್ಠಿ, ಬಿಸಿ ಗಾಳಿ ಮತ್ತು ಚಳಿ ಗಾಳಿಯಿಂದ ಬೆಳೆ ಇಳುವರಿ ಕುಂಟಿತವಾಗುತ್ತಿದೆ. ಹಾಗಾಗಿಯೇ ಭಾರತದಲ್ಲಿ ಕೃಷಿಯನ್ನು ಹವಾಮಾನದೊಂದಿಗೆ ಆಡುವ ಜೂಜು ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಬಹಳ ಹಿಂದಿನಿಂದಲೂ ಅನ್ನದಾತರ ನೆರವಿಗೆ ನಿಲ್ಲುವ ಮೂಲಕ ಮಹತ್ವದ ಸೇವೆ ನೀಡುತ್ತಿದೆ.

ಗ್ರಾಮೀಣ ಕೃಷಿ ಮೌಸಂ ಸೇವಾ (ಜಿಕೆಎಂಎಸ್) ಯೋಜನೆ ಸರ್ಕಾರದ ಇಂಥಹ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದರ ಜತೆಯಲ್ಲಿ ದೇಶದ ೫೩೦ ಜಿಲ್ಲೆಗಳಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕಗಳೂ ಕಾರ್ಯಾಚರಿಸುತ್ತಿವೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆಗಳನ್ನು ಸ್ವೀಕರಿಸಲು ಮತ್ತು ಇವುಗಳ ಆಧಾರದಲ್ಲಿ ಸಂಬಂಧಿಸಿದ ಕೃಷಿಕರಿಗೆ ಅಗತ್ಯ ಸಲಹೆಗಳನ್ನು ನೀಡಲು ಈ ಘಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆಯಾಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಭಾರತೀಯ ಹವಾಮಾನ ಇಲಾಖೆ ವರದಿಗಳನ್ನು ಆಧರಿಸಿ ರೈತರಿಗೆ ಸಲಹೆ ನೀಡುವ ಕೆಲಸವನ್ನು ಜಿಲ್ಲಾ ಕೃಷಿ ಹವಾಮಾನ ಘಟಕಗಳು ಮಾಡುತ್ತಿವೆ.

ವಿಭಿನ್ನ ಭೌಗೋಳಿಕ ರಚನೆಗಳನ್ನು ಹೊಂದಿರುವ ಭಾರತದಲ್ಲಿ ಮಳೆಯ ಪ್ರಮಾಣ ಒಂದೇ ರೀತಿಯಲ್ಲಿ ಬೀಳುವುದಿಲ್ಲ. ಹಾಗೇಯೇ ಬೆಳೆ ಪದ್ಧತಿಯೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲೂ ಮಳೆಯ ಪ್ರಮಾಣ, ಬೆಳೆ ಪದ್ಥತಿ ವಿಭಿನ್ನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರಾಜ್ಯದ ೧೨ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯಾ ಭಾಗಕ್ಕೆ ಅನುಸಾರವಾಗಿ ಕೇಂದ್ರೀಕೃತ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲಾಮಟ್ಟದ ಕೃಷಿ ಹವಾಮಾನ ಘಟಕ ಸ್ಥಾಪಿಸಿದೆ. ಈ ಘಟಕಗಳು ಆಯಾ ತಾಲೂಕಿನ ಕೃಷಿಗೆ ಸಂಬಂಧಿಸಿದ ಹವಾಮಾನ ಆಧಾರಿತ ಕೃಷಿ ಸಲಹೆಯ ಮಾಹಿತಿ ನೀಡುತ್ತಿದೆ.

೨೦೧೯ರಿಂದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಕೃಷಿ ಹವಾಮಾನ ಘಟಕಗಳು ಕಾರ್ಯಾಚರಿಸುತ್ತಿವೆ. ವಾರದಲ್ಲಿ ೨ ಬಾರಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಾಲೂಕುವಾರು ಪ್ರತ್ಯೇಕ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಈ ಘಟಕಗಳು ತಯಾರಿಸಿ ಬಿಡುಗಡೆ ಮಾಡುತ್ತವೆ. ಈ ಹವಾಮಾನ ಆಧಾರಿತ ಕೃಷಿ ಸಲಹೆಗಳು ರೈತರಿಗೆ ಸಮಗ್ರ ಮಾರ್ಗದರ್ಶನ ನೀಡುವಂತಿದ್ದು,. ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ, ನಾಟಿ, ಬಿತ್ತನೆ, ಹಂತವಾರು ಕೀಟ ಹಾಗೂ ರೋಗಗಳ ಮಾಹಿತಿ, ತಡೆಗಟ್ಟುವ ಕ್ರಮಗಳು, ಕೃಷಿ ಉತ್ಪನ್ನಗಳ ಕಟಾವು, ಸಂಸ್ಕರಣೆ ಕುರಿತು ಸಮಗ್ರ ಮಾಹಿತಿ ಒದಗಿಸುತ್ತದೆ.

ಬೆಳೆಗಳ ಸ್ಥಿತಿ, ಬೆಳೆಯ ಹಂತ, ಮಣ್ಣಿನ ತೇವಾಂಶದ ಪ್ರಮಾಣ, ಕೀಟ ಅಥವಾ ರೋಗಗಳ ಹಾವಳಿ, ಬೆಳೆಗಳಿಗೆ ಕಾಡುವ ಸಮಸ್ಯೆಗಳನ್ನು ಕೃಷಿ ವಿಜ್ಞಾನ ಕೇಂದ್ರದ ವಿವಿಧ ವಿಷಯ ತಜ್ಞರ ಮೂಲಕ ಮತ್ತು ಕೃಷಿ ಇಲಾಖೆಯಿಂದ ತೆಗೆದುಕೊಳ್ಳಲಾಗುತ್ತದೆ. ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಜಾನುವಾರು, ಕೋಳಿ, ಕುರಿ ಸಾಕಾಣೆ ಮತ್ತು ಮೀನುಗಾರಿಕೆ ಬಗ್ಗೆ, ಋತುವಿಗೆ ಅನುಗುಣವಾಗಿ ಜಾನುವಾರುಗಳಿಗೆ ಬರಬಹುದಾದ ರೋಗಗಳು, ಅದಕ್ಕೆ ನೀಡಬಹುದಾದ ಲಸಿಕೆ, ಔಷಧಗಳ ಬಗ್ಗೆ ಆಯಾಭಾಗದ ಪಶು ವೈದ್ಯಾಧಿಕಾರಿಗಳಿಂದ ಪಡೆದುಕೊಳ್ಳಲಾಗುತ್ತದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ೫ ದಿನಗಳವರೆಗಿನ ಹವಾಮಾನ ಅಂಶಗಳಾದ ಮಳೆ ಮತ್ತು ಮೋಡದ ಪ್ರಮಾಣ, ಗರಿಷ್ಠ ಮತ್ತು ಕನಿಷ್ಠ ತಾಪಮಾನ, ಬೆಳಗಿನ ಹಾಗೂ ಮಧ್ಯಾಹ್ನದ ಆರ್ದ್ರತೆಯ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವೇಗದ ಕುರಿತು ಮಾಹಿತಿ ನೀಡುತ್ತದೆ. ಇದನ್ನೆಲ್ಲಾ ಕ್ರೋಢೀಕರಿಸಿ ಕೃಷಿ ಹವಾಮಾನ ಶಾಸ್ತ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಪರಸ್ಪರ ಚರ್ಚಿಸಿ, ಹವಾಮಾನ ಮುನ್ಸೂಚನೆ ಅನುಸಾರವಾಗಿ ಸೂಕ್ತ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಜಿಲ್ಲಾ ಕೃಷಿ ಹವಾಮಾನ ಘಟಕಗಳಲ್ಲಿ ತಯಾರಿಸಲಾಗುತ್ತದೆ.

ಹೀಗೆ ತಯಾರಿಸಲಾದ ವರದಿಗಳನ್ನು ಭಾರತೀಯ ಹವಾಮಾನ ಇಲಾಖೆ ಜಾಲತಾಣದಲ್ಲಿ, ಎಂ. ಕಿಸಾನ್ ಪೋರ್ಟಲ್‌ನಲ್ಲಿ, ಕೃಷಿ ಇಲಾಖೆಯ ಅಧಿಕಾರಿಗಳಿಗೆ, ಕ್ಷೇತ್ರ ಮಾಹಿತಿ ನೀಡುವವರಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ. ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲೂ ಇವುಗಳನ್ನು ಹಂಚಲಾಗುತ್ತದೆ. ಗ್ರಾಮಾಂತರ ಮಟ್ಟದಲ್ಲಿ ರೈತರಿಗೆ ಹಾಗೂ ವಿಸ್ತರಣಾ ಅಧಿಕಾರಿಗಳಿಗೆ ಹವಾಮಾನ ಮುನ್ಸೂಚನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಹವಾಮಾನ ಆಧಾರಿತ ಕೃಷಿ-ಸಲಹೆ ಮೂಲಕ ಕೃಷಿ ನಷ್ಟ ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತದೆ.

ಜಿಲ್ಲಾ ಕೃಷಿ ಹವಾಮಾನ ಘಟಕಗಳ ಈ ಕಾರ್ಯದಿಂದ ರೈತರಿಗೆ ಬಿತ್ತನೆ ಕಾರ್ಯ, ಅಂತರ ಬೇಸಾಯ, ಸಮಯಕ್ಕನುಗುಣವಾಗಿ ಕಿಟನಾಶಕ ಸಿಂಪರಣೆ ಮಾಡಲು, ಅನಗತ್ಯ ಕೀಟ ಅಥವಾ ರೋಗ ನಿರೋಧಕ ಸಿಂಪರಣೆಗಳನ್ನು ಕಡಿಮೆ ಮಾಡಲು, ಬೆಳೆಗಳಿಗೆ ನೀರು ಹಾಯಿಸುವುದನ್ನು ನಿರ್ಧರಿಸಲು, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಕಟಾವು ಮಾಡಿ ರಾಶಿ ಮಾಡಲು ಮತ್ತು ಕಟಾವಿನ ನಂತರದ ಕೆಲಸಗಳು, ಜೊತೆಗೆ ಋತುವಿಗೆ ಅನುಗುಣವಾಗಿ ಪಶು ಸಂಗೋಪನೆ, ಕುರಿ ಹಾಗೂ ಕೋಳಿ ಸಾಕಾಣಿಕೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ.

ಈ ರೀತಿಯಲ್ಲಿ ಕೃಷಿಕರಿಗೆ ಸಾಕಷ್ಟು ಉಪಯೋಗ ಇರುವ ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಮುಚ್ಚಲು ಸಿದ್ಧತೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಘಟಕದ ಎಲ್ಲಾ ಚಟುವಟಿಕೆ ನಿಲ್ಲಿಸುವಂತೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೂಚನೆ ಬಂದಿದೆ. ಈ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಹವಾಮಾನ ತಜ್ಞ ಮತ್ತು ಹವಾಮಾನ ಪರೀವೀಕ್ಷಕರು ಕೂಡ ಫೆಬ್ರವರಿ ಕೊನೆಗೆ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಉಳಿಸಿಕೊಳ್ಳುವ ಮೂಲಕ ಅನ್ನದಾತರ ನೆರವಿಗೆ ಧಾವಿಸುವಂತೆ ಒತ್ತಾಯ ಕೇಳಿಬರುತ್ತಿದೆ.