ರಟ್ಟಿಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಸೋಮವಾರದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇರೆಗೆ ಮಂಗಳವಾರ ಸ್ಥಗಿತಗೊಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ ಮತ್ತು ಪಪಂ ಮುಖ್ಯಾಧಿಕಾರಿ ರಾಜಶೇಖರ ಚೌಗಲಾ ಮಂಗಳವಾರ ಭೇಟಿ ನೀಡಿ, ಜನರ ಬೇಡಿಕೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಘಟಕ ಮರು ಆರಂಭ, ಪಪಂ 10 ವಾಣಿಜ್ಯ ಮಳಗಿಗೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು, ಎನ್‌ಒಸಿ ವಿತರಣೆ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ಕೈಗೊಂಡಿದ್ದರು.
ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ ಮಾತನಾಡಿ, ಪಟ್ಟಣದಲ್ಲಿ 24 ಗಂಟೆಗಳ ಕಾಲ ನದಿ ನೀರು ಪೂರೈಸುವ ಸಲುವಾಗಿ ಡಿಪಿಆರ್ ತಯಾರಿಸಿ ಸಲ್ಲಿಸಲಾಗಿದೆ. ಇದರನ್ವಯ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಕೋಟೆ ಓಣಿಯಲ್ಲಿ ಸ್ಥಗಿತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಲಾಗುವುದು. ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರ ನೇಮಕ ಮಾಡುವಂತೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಪೂರ್ಣಗೊಂಡಿರುವ ಪಪಂ ವಾಣಿಜ್ಯ ಮಳಿಗೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಹೆಸ್ಕಾಂ ಅಧಿಕಾರಿ ನಾಗರಾಜ, ಶಂಕರ ಬಿದರಿ, ಗ್ರಾಪಂ ಮಾಜಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ನಾಸೀರಸಾಬ್ ಸೈಕಲ್ಗಾರ, ರಿಯಾಜ ನರಗುಂದಕರ, ಪರಮೇಶಪ್ಪ ಕಟ್ಟೇಕಾರ, ಯೂಸೂಫ್ ಸೈಕಲ್ಗಾರ, ಯಲ್ಲಪ್ಪ ಮರಾಠೆ, ಮಂಜುನಾಥ ಮಾಸೂರು, ನಾಗನಗೌಡ ಕೋಣ್ತಿ, ರೂಪಾ ಅಂಬ್ಲೇರ್, ರತ್ನಮ್ಮ ಕಮ್ಮಾರ, ಶೋಭಾ ಪೂಜಾರ, ವೀರಪ್ಪ ಮುದಿಯಪ್ಪನವರ, ಇತರರು ಇದ್ದರು.
ಪಟ್ಟಣದಲ್ಲಿ ಕೆಲ ಮನೆ, ನೀರಿನ ಕರ ಮತ್ತು ಉದ್ದಿಮೆಗಳ ಪರವಾನಗಿ ಶುಲ್ಕ ಬಾಕಿ ಇದೆ. ಸಾರ್ವಜನಿಕರು ತೆರಿಗೆ ಪಾವತಿಸಬೇಕು. ಕಸ ವಿಲೇವಾರಿಗೆ 1 ಟ್ರಾೃಕ್ಟರ್ ಟ್ರೇಲರ್, 2 ಆಟೋ ಟಿಪ್ಪರಗಳಿಗಾಗಿ ಟೆಂಡರ್ ಕರೆಯಲಾಗುತ್ತಿದೆ. ಮೂರು ವಾಹನಗಳ ಮೂಲಕ ಕಸ ವೀಲೆವಾರಿ ಮಾಡಲಾಗುತ್ತದೆ.ರಾಜಶೇಖರ ಚೌಗಲಾ, ಪಪಂ ಮುಖ್ಯಾಧಿಕಾರಿ