ಜಿಲ್ಲೆ

ಕುಟುಂಬ ರಾಜಕಾರಣ ಕೊನೆಗಾಣಲಿ: ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಕರೆ

ಚನ್ನಪಟ್ಟಣ: ಜಿಲ್ಲೆಯಲ್ಲಿನ ಆರ್ಭಟ ಹಾಗೂ ಕೌಟುಂಬಿಕ ರಾಜಕಾರಣ ಕೊನೆಗಾಣಿಸಬೇಕು. ಮುಂಬರುವ ಗ್ರಾಪಂ ಚುನಾವಣೆ ಈ ಎಲ್ಲದಕ್ಕೂ ನಾಂದಿಯಾಗಬೇಕು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಶೇ.80 ಆಯ್ಕೆಯಾಗುವ ಮೂಲಕ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಬೇಕು ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಕರೆ ನೀಡಿದರು.

ಜಗದಾಪುರ ಶಾಲಾ ಆವರಣದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಗ್ರಾಮಸ್ವರಾಜ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಕೇವಲ ಅಬ್ಬರದ ಹಾಗೂ ಮಾತಿನ ರಾಜಕೀಯ ನಡೆದಿದೆಯೇ ಹೊರತು ಯಾವ ಅಭಿವೃದ್ಧಿಯೂ ಆಗಿಲ್ಲ. ಅಧಿಕಾರ ಇದ್ದಾಗ ತಲೆಗೆ ಹತ್ತಬಾರದು, ಮೈ ಮರೆಯಬಾರದು, ಜನತೆಯ ಸೇವೆ ಮಾಡದ ಅಧಿಕಾರ ಅಧಿಕಾರವೇ ಅಲ್ಲ ಎಂದು ಮಾಜಿ ಸಿಎಂ ಎಚ್​ಡಿಕೆ ಹಾಗೂ ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಯ ಮಹಾಪರ್ವ ಆರಂಭವಾಗಿವೆ. ಇಷ್ಟು ದಿನ ಅಭಿವೃದ್ಧಿ ಕಾಗದದ ಮೇಲಿತ್ತು. ಇದೀಗ ಅನುಷ್ಠಾನಗೊಂಡಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಸಾಧ್ಯವಾಗಿಸಲು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಗ್ರಾಮಮಟ್ಟದ ಅಧಿಕಾರವನ್ನು ಪಕ್ಷದ ಬೆಂಬಲಿಗರು ಹಿಡಿಯಬೇಕು ಎಂದರು.

ಜಿಲ್ಲೆಯಲ್ಲಿ ಇದುವರೆಗೆ ರಾಜಕಾರಣ ಮಾಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭಿವೃದ್ಧಿಯಲ್ಲಿ ವಿಫಲವಾಗಿವೆ. ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದೆ ಎಂದು ಭರವಸೆ ನೀಡಿದರು.

ಯೋಜನೆಗಳನ್ನು ಜನರಿಗೆ ತಲುಪಿಸಿ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶ ಅಭಿವೃದ್ಧಿಗೊಳ್ಳುತ್ತಿರುವುದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುವ ಮನಸ್ಸು ವಿರೋಧ ಪಕ್ಷಗಳಿಗೆ ಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಿ, ಅವರಿಂದ ಬಿಜೆಪಿ ಬೆಂಬಲಿತರಿಗೆ ಮತ ಹಾಕಿಸಬೇಕಾದ ಮಹತ್ತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ತಿಳಿಸಿದರು.

ಕೋಲಾರ ಸಂಸದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾವಿವೇಕಾನಂದ, ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಂ, ನಗರ ಅಧ್ಯಕ್ಷ ಆರ್. ಶಿವಕುಮಾರ್, ತಾಪಂ ಅಧ್ಯಕ್ಷ ಹರೂರು ರಾಜಣ್ಣ ಸೇರಿದಂತೆ ಚನ್ನಪಟ್ಟಣ ಹಾಗೂ ಕನಕಪುರ ತಾಲೂಕಿನ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಜೋಡೆತ್ತುಗಳ ಕಾಲ ಮುಗಿದಿದೆ

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿ, ಬೇರುಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಗ್ರಾಪಂ ಚುನಾವಣೆ ಮುಖ್ಯವಾಗಿದೆ. ಸರ್ಕಾರಗಳು ಎಷ್ಟೇ ಕಾರ್ಯಕ್ರಮಗಳನ್ನು ರೂಪಿಸಿದರೂ ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಗ್ರಾಪಂಗಳ ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಜೋಡೆತ್ತುಗಳ ರಾಜಕೀಯ ಮುಗಿದಿದ್ದು, ಪರಿವರ್ತನಾ ಕಾಲ ಬಂದಿದೆ. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರೊಬ್ಬರ ಸ್ವತ್ತಲ್ಲ

ಡಿಸಿಎಂ ಭಾಷಣದ ವೇಳೆ ಮಧ್ಯ ಪ್ರವೇಶಿಸಿದ ಕಾರ್ಯಕರ್ತರು ಜಿಲ್ಲೆಯಲ್ಲಿ ಹಾಗೂ ಕನಕಪುರದಲ್ಲಿ ಅನ್ಯ ಪಕ್ಷದವರ ಕಿರುಕುಳ ಹೆಚ್ಚಾಗಿದೆ. ಯೋಗೇಶ್ವರ್​ಗೆ ಮಂತ್ರಿ ಸ್ಥಾನ ನೀಡಿದರೆ ಅವುಗಳಿಗೆ ಕಡಿವಾಣ ಬೀಳಲಿದೆ ಎಂದು ಗಮನ ಸೆಳೆದರು. ಇದರಿಂದ ಕೋಪಗೊಂಡ ಡಿಸಿಎಂ, ಈ ಜಿಲ್ಲೆ ಯಾರೊಬ್ಬರ ಸ್ವತ್ತಲ್ಲ, ನಿಮ್ಮ ಕೆಲಸವನ್ನು ನೀವು ಧೈರ್ಯವಾಗಿ ಮಾಡಿ. ನಿಮಗೆ ತೊಂದರೆಕೊಟ್ಟವರು ಯಾರೂ ಉಳಿಯುವುದಿಲ್ಲ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಿಮಗೆ ತೊಂದರೆ ಕೊಟ್ಟವರಿಗೆ ಬುದ್ಧಿ ಕಲಿಸುವುದು ನಮಗೆ ಗೊತ್ತಿದೆ. ಅಸಹಾಯಕರಾಗಿ ಬದುಕಬೇಡಿ, ಅದು ಬದುಕಲ್ಲ, ಬದುಕಿದರೂ ಸಾರ್ಥಕವಲ್ಲ ಎನ್ನುವ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.