ಜಿಲ್ಲೆ

ಅಹೋರಾತ್ರಿ ಧರಣಿ ಅಂತ್ಯ

ವೀರೇಶ ಸೌದ್ರಿ

ಗದಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರು, ಬಗರ್‌ಹುಕುಂ ಸಾಗುವಳಿದಾರರ ಹಾಗೂ ಅರಣ್ಯ ಅವಲಂಬಿತರ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಅಂತ್ಯಗೊಂಡಿದೆ.

ಸ್ಥಳಕ್ಕೆ ಸಚಿವ ಎಚ್.ಕೆ. ಪಾಟೀಲ ಅವರು ಇತ್ತೀಚೆಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ, ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಆದರೆ, ಹೋರಾಟಗಾರರು ಬೇಡಿಕೆಗಳು ಕೂಡಲೇ ಕಾರ್ಯರೂಪಕ್ಕೆ ಬರುವಂತೆ ಜಿಲ್ಲಾಧಿಕಾರಿ ಆದೇಶ ನೀಡುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕಳೆದ 7 ದಿನಗಳಿಂದ ನಡೆದ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಆಗಮಿಸಿ, ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲು ಆದೇಶ ನೀಡುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆ ಧರಣಿ ಹಿಂಪಡೆಯಲಾಯಿತು.

ಅರಣ್ಯ ಅವಲಂಬಿತರ ಹೊಸ ಅರ್ಜಿ ಸ್ವೀಕಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಜತೆಗೆ ತಿರಸ್ಕೃತ ಅರ್ಜಿಗಳ ಮರು ಪರಿಶೀಲನಾ ಸಭೆ ಜಿಲ್ಲಾ ಉಪವಿಭಾಗಾಧಿಕಾರ ನೇತೃತ್ವದಲ್ಲಿ ನಡೆಯಲಿದೆ. ಈಗಾಗಲೇ ಸಲ್ಲಿಸಿದ ಅರ್ಜಿಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದಕ್ಕೂ ಶೀಘ್ರವೇ ಪ್ರಕ್ರಿಯೆ ನಡೆಯಲಿದೆ. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದರಿಂದ ಧರಣಿ ಅಂತ್ಯಗೊಳಿಸುತ್ತಿದ್ದೇವೆ ಎಂದರು. ಬಸವಣೆಪ್ಪ ಚಿಂಚಲಿ, ಎನ್.ಟಿ. ಪೂಜಾರ, ಪುರಪ್ಪ ನಾಯಕ, ನಾಮದೇವ ಫಿರೋಜ್ ಇತರರು ಇದ್ದರು.